ADVERTISEMENT

ಕಾರವಾರ- ಸಿ.ಎಂ. ಆಗಮನ: ಬೆಟ್ಟದಷ್ಟು ನಿರೀಕ್ಷೆ

ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುವ ಕನಸು: ಹೊಸ ಜಿಲ್ಲೆ ಘೋಷಣೆ ಆಸೆ!

ಗಣಪತಿ ಹೆಗಡೆ
Published 15 ಜನವರಿ 2023, 0:15 IST
Last Updated 15 ಜನವರಿ 2023, 0:15 IST
ಯಲ್ಲಾಪುರ ತಾಲ್ಲೂಕಿನ ತಳಕೆಬೈಲ್‍ನಲ್ಲಿ ಭೂಕುಸಿತ ಉಂಟಾಗಿದ್ದ ಪ್ರದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು (ಸಂಗ್ರಹ ಚಿತ್ರ)
ಯಲ್ಲಾಪುರ ತಾಲ್ಲೂಕಿನ ತಳಕೆಬೈಲ್‍ನಲ್ಲಿ ಭೂಕುಸಿತ ಉಂಟಾಗಿದ್ದ ಪ್ರದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು (ಸಂಗ್ರಹ ಚಿತ್ರ)   

ಕಾರವಾರ: ಯಲ್ಲಾಪುರದ ಕಳಚೆ, ಭಟ್ಕಳದ ಮುಟ್ಟಳ್ಳಿಯಲ್ಲಿ ಭೂಕುಸಿತ ಉಂಟಾಗಿದ್ದ ವೇಳೆ ಪರಿಶೀಲನೆಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ಮೂರನೆ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ಕೂಗಳತೆ ದೂರದಲ್ಲಿರುವ ಹೊತ್ತಲ್ಲಿ ಬರುತ್ತಿರುವ ಕಾರಣ ಜಿಲ್ಲೆಯ ಜನ ಬೆಟ್ಟದಷ್ಟು ನಿರೀಕ್ಷೆ ಹೊತ್ತು ಕಾದಿದ್ದಾರೆ.

2021ರ ಜುಲೈ 22 ರಂದು ಯಲ್ಲಾಪುರದ ಕಳಚೆಯಲ್ಲಿ ಊರಿಗೆ ಊರು ಕುಸಿದಿದ್ದ ವೇಳೆ ಅಧಿಕಾರ ವಹಿಸಿದ ಮಾರನೇ ದಿನವೇ ಮುಖ್ಯಮಂತ್ರಿ ಊರಿಗೆ ಭೇಟಿ ಕೊಟ್ಟಿದ್ದರು. ಗ್ರಾಮದ ಮರುನಿರ್ಮಾಣದ ಭರವಸೆ ನೀಡಿದ್ದರು. ಒಂದೂವರೆ ವರ್ಷ ಉರುಳಿದರೂ ಕಳಚೆ ಗ್ರಾಮ ಪುನಶ್ಚೇತನ ಕಂಡಿಲ್ಲ ಎಂಬ ಕೊರಗು ಗ್ರಾಮಸ್ಥರಲ್ಲಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಭಟ್ಕಳದ ಮುಟ್ಟಳ್ಳಿಗೆ ಭೇಟಿ ನೀಡಿದ್ದಾಗಲೂ ಕೊಟ್ಟ ಪರಿಹಾರದ ಭರವಸೆ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ ಎಂಬುದು ಅಲ್ಲಿನ ಜನರ ಮಾತು.

ಸುಪರ್ ಸ್ಪೆಶಾಲಿಟಿ ಆಸ್ಪತ್ರೆ, ಕೈಗಾರಿಕೆ ಸ್ಥಾಪನೆ, ಉದ್ಯೋಗ ಸೃಷ್ಟಿ, ಸೇರಿದಂತೆ ಅನೇಕ ಭರವಸೆಗಳು ಈಡೇರಿಲ್ಲ ಎಂಬುದು ಜಿಲ್ಲೆಯ ಯುವಕರನ್ನು ಕಾಡುತ್ತಿದೆ.

ADVERTISEMENT

ಗ್ರಾಮೀಣ ಭಾಗದಲ್ಲಿ ಇ–ಸ್ವತ್ತು ತಂತ್ರಾಂಶ, ನಗರ ಪ್ರದೇಶದಲ್ಲಿ ಫಾರಂ ನಂ.3 ಗೊಂದಲ ಇನ್ನೂ ಮುಂದುವರೆದಿದೆ. ಇದರಿಂದ ಕಟ್ಟಡ ನಿರ್ಮಾಣಕ್ಕೆ ತೊಡಕಾಗುತ್ತಿದೆ. ಸ್ವಂತ ಜಮೀನು ಹೊಂದಿದ್ದರೂ ಬ್ಯಾಂಕ್ ಸಾಲ ಪಡೆಯಲು ಆಗದೆ ಜನರು ಪರದಾಡುತ್ತಿದ್ದಾರೆ.

‘ನಮ್ಮದೇ ಜಾಗಕ್ಕೆ ದಾಖಲೆ ಪಡೆಯಲು ಫಾರಂ ನಂ.3 ನಿಯಮ ಅಡ್ಡಿಯಾಗಿದೆ. ಸರ್ಕಾರದ ಅವೈಜ್ಞಾನಿಕ ನಿಯಮ ಶಿರಸಿ ಸೇರಿದಂತೆ ಹಲವು ಪಟ್ಟಣಗಳಿಗೆ ಮಾರಕವಾಗಿ ಪರಿಣಮಿಸಿದೆ. ಈ ನಿಯಮಾವಳಿ ಸಡೀಲಿಕರಣಗೊಳಿಸಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಹೆಬ್ಬಾರ.

‘ಅರಣ್ಯ ಅತಿಕ್ರಮಣದಾರರ ಸಮಸ್ಯೆಗೆ ಸ್ಪಂದಿಸುವ ಕೆಲಸ ಸರ್ಕಾರದಿಂದ ಸರಿಯಾಗಿ ನಡೆಯುತ್ತಿಲ್ಲ. ಸುಪ್ರಿಂ ಕೋರ್ಟ್‍ನಲ್ಲಿ ಅತಿಕ್ರಮಣದಾರರ ಪರ ಅಫಿಡವಿಟ್ ಸಲ್ಲಿಸಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಒಕ್ಕಲೆಬ್ಬಿಸಲು ಕೋರ್ಟ್ ಆದೇಶಿಸಿದರೆ ಲಕ್ಷಾಂತರ ಜನ ಬೀದಿಗೆ ಬೀಳಬಹುದು ಎಂಬ ಆಲೋಚನೆಯಾದರೂ ಸಿ.ಎಂ. ಗಮನಕ್ಕಿರಲಿ’ ಎನ್ನುತ್ತಾರೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ.

------------------

ಹೊಸ ಜಿಲ್ಲೆ ಆಸೆ

ಉತ್ತರ ಕನ್ನಡವನ್ನು ವಿಭಜಿಸಿ ಪ್ರತ್ಯೇಕ ಶಿರಸಿ ಜಿಲ್ಲೆ ರಚನೆಗೆ ಹಲವು ವರ್ಷದಿಂದ ಹೋರಾಟ ನಡೆಯುತ್ತಿದೆ. ಈಚೆಗೆ ಜಿಲ್ಲೆ ರಚನೆ ಕಸರತ್ತು ಬಿರುಸುಗೊಂಡಿತ್ತು. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಜಿಲ್ಲೆ ಹೋರಾಟ ಸಮಿತಿ ಸಿ.ಎಂ.ಗೆ ಮನವಿ ಸಲ್ಲಿಸಿತ್ತು.

‘ಪ್ರತ್ಯೇಕ ಜಿಲ್ಲೆ ರಚನೆಗೆ ಹೋರಾಟ ನಡೆಯುತ್ತಿರುವ ಶಿರಸಿಗೆ ಮುಖ್ಯಮಂತ್ರಿ ಭೇಟಿ ನೀಡುತ್ತಿರುವ ಕಾರಣ ಹೊಸ ಜಿಲ್ಲೆ ಘೋಷಣೆ ಮಾಡಬಹುದು’ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

--------------

ಜಿಲ್ಲೆಯ ಜನರ ಮುಖ್ಯ ಬೇಡಿಕೆಗಳು

* ಅರಣ್ಯ ಅತಿಕ್ರಮಣದಾರರಿಗೆ ಭೂಮಿ ಹಕ್ಕಿನ ಭದ್ರತೆ ಒದಗಿಸುವುದು

* ಜಿಲ್ಲೆಯಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಯಾಗಬೇಕು

* ಸುಸಜ್ಜಿತ ವಿಶ್ವವಿದ್ಯಾಲಯ ಸ್ಥಾಪನೆಗೊಳ್ಳಬೇಕು

* ಪಾಳುಬಿದ್ದ ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ಕೈಗಾರಿಕೆ ಆರಂಭಿಸಿ ಉದ್ಯೋಗ ಸೃಷ್ಟಿಸಬೇಕು

* ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜಿಸಬೇಕು

* ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತಬೇಕು. ಬಂದರುಗಳ ಮೂಲಸೌಕರ್ಯ ವೃದ್ಧಿಸಬೇಕು

* ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಕಡೆಗಳಲ್ಲಿ ಕಾಲುಸಂಕಗಳನ್ನು ಸ್ಥಾಪಿಸಬೇಕು

* ಕಾಮಗಾರಿಗಳಿಗೆ ಕಚ್ಚಾ ಸಾಮಗ್ರಿಗಳ ಕೊರತೆ ಉಂಟಾಗುವ ಸಮಸ್ಯೆ ನೀಗಿಸಬೇಕು. ಜತೆಗೆ ಗುತ್ತಿಗೆದಾರರಿಗೆ ಪಾವತಿಯಾಗಬೇಕಿರುವ ₹ 300 ಕೋಟಿಯಷ್ಟು ಮೊತ್ತ ಬಿಡುಗಡೆಗೊಳಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.