ADVERTISEMENT

ಉತ್ತರ ಕನ್ನಡ: ರಭಸದ ಮಳೆಗೆ ಹೊಳೆಯಂತಾದ ರಸ್ತೆ

ಮೂರು ತಾಸು ವಾಹನ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 12:29 IST
Last Updated 12 ಜೂನ್ 2020, 12:29 IST
ಶಿರಸಿಯ ಯಲ್ಲಾಪುರ ರಸ್ತೆಯಲ್ಲಿ ಮಳೆಯ ನೀರು ನಿಂತಿರುವುದು
ಶಿರಸಿಯ ಯಲ್ಲಾಪುರ ರಸ್ತೆಯಲ್ಲಿ ಮಳೆಯ ನೀರು ನಿಂತಿರುವುದು   

ಶಿರಸಿ: ದಶಕಗಳಿಂದ ನೀರು ಹೋಗುತ್ತಿದ್ದ ಮುಖ್ಯ ಚರಂಡಿಯ ಮೇಲೆ ಕಾಂಕ್ರೀಟ್ ಗೋಡೆ ಕಟ್ಟಿರುವ ಪರಿಣಾಮ, ಶುಕ್ರವಾರ ಇಲ್ಲಿನ ಯಲ್ಲಾಪುರ ನಾಕಾ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಮೂರು ತಾಸಿಗೂ ಅಧಿಕ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಶುಕ್ರವಾರ ತಾಲ್ಲೂಕಿನಲ್ಲಿ ರಭಸದ ಮಳೆ ಸುರಿಯಿತು. ಆಗಾಗ ಸಣ್ಣ ಬಿಡುವುಕೊಟ್ಟು, ದಿನವಿಡೀ ಸುರಿದ ಮಳೆಯಿಂದ ಕೃಷಿಕರ ಸಂತಸಗೊಂಡಿದ್ದಾರೆ. ನಗರದಲ್ಲಿ ತಗ್ಗು ಪ್ರದೇಶದ ನಿವಾಸಿಗಳು ಪಡಿಪಾಟಲು ಅನುಭವಿಸಿದರು. ಇಲ್ಲಿನ ಯಲ್ಲಾಪುರ ರಸ್ತೆಯ ಡಾ. ಆಶಾಪ್ರಭು ಆಸ್ಪತ್ರೆಯ ಬಳಿ ಇರುವ ಗಟಾರವನ್ನು ಖಾಸಗಿ ವ್ಯಕ್ತಿಗಳು ಬಂದ್ ಮಾಡಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಗಟಾರ ಮುಚ್ಚಿರುವ ಪರಿಣಾಮ, ಮರಾಠಿಕೊಪ್ಪ, ವಿದ್ಯಾನಗರ ಮತ್ತಿತರ ಕಡೆಗಳಿಂದ ಬರುವ ಮಳೆ ನೀರು ಮುಂದೆ ಸಾಗದೆ ರಸ್ತೆಯೇ ಹೊಳೆಯಂತೆ ಕಾಣುತ್ತಿತ್ತು. ಇಡೀ ಪ್ರದೇಶ ಜಲಾವೃತಗೊಂಡು ರಸ್ತೆಯಂಚಿನ ಅಂಗಡಿ, ಹೋಟೆಲ್‌ಗಳಿಗೆ ನೀರು ನುಗ್ಗಿತು.

ಕಾಂಕ್ರೀಟ್ ಗೋಡೆ ಕಟ್ಟಿರುವುದನ್ನು ವಿರೋಧಿಸುತ್ತಲೇ ಬಂದಿರುವ ಸ್ಥಳೀಯರು, ರಸ್ತೆಯ ಮೇಲೆ ನೀರು ನಿಂತಿದ್ದನ್ನು ಕಂಡು, ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು. ‘ಅನಾದಿ ಕಾಲದಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿರುವ ಮುಖ್ಯ ಗಟಾರ ಬಂದ್ ಮಾಡಿದ್ದರಿಂದ ಈ ಸಮಸ್ಯೆಯಾಗಿದೆ. ಸ್ಥಳೀಯರ ಮನೆಗಳಿಗೆ ನೀರು ನುಗ್ಗುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವ ತನಕ ಚರಂಡಿ ತೆರೆದು ಹಿಂದಿನಂತೆ ನೀರು ಹೋಗಲು ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾತಾವರಣ ತಿಳಿಗೊಳಿಸಿದರು. ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ, ಬಿಜೆಪಿ ಪ್ರಮುಖರಾದ ಗಣಪತಿ ನಾಯ್ಕ, ರಾಜೇಶ ಶೆಟ್ಟಿ, ನಂದನ ಸಾಗರ, ರಾಘವೇಂದ್ರ ಶೆಟ್ಟಿ, ಸ್ಥಳೀಯರಾದ ಗಣಪತಿ, ಪ್ರಸನ್ನ ಶೆಟ್ಟಿ,ವಿಶ್ವನಾಥ ಶೆಟ್ಟಿ, ಕಿರಣ್ ಶೆಟ್ಟರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.