ADVERTISEMENT

ಮುಂಡಗೋಡ: ಮರ ಧರೆಗುರುಳುವ ಮುನ್ನ ತೆರವು ಮಾಡಿ

ಟಿಬೆಟನ್ ಕ್ಯಾಂಪ್ ರಸ್ತೆಯುದ್ದಕ್ಕೂ ಭಾಗಿದ ಮರಗಳು

​ಶಾಂತೇಶ ಬೆನಕನಕೊಪ್ಪ
Published 19 ಜುಲೈ 2023, 5:21 IST
Last Updated 19 ಜುಲೈ 2023, 5:21 IST
ಪಟ್ಟಣದ ಅಮ್ಮಾಜಿ ಕೆರೆಯಿಂದ ಟಿಬೆಟನ್ ಕ್ಯಾಂಪ್‌ ಮಾರ್ಗದ ಹೆದ್ದಾರಿ ಪಕ್ಕದಲ್ಲಿರುವ ಮರಗಳು
ಪಟ್ಟಣದ ಅಮ್ಮಾಜಿ ಕೆರೆಯಿಂದ ಟಿಬೆಟನ್ ಕ್ಯಾಂಪ್‌ ಮಾರ್ಗದ ಹೆದ್ದಾರಿ ಪಕ್ಕದಲ್ಲಿರುವ ಮರಗಳು   

ಮುಂಡಗೋಡ: ಪಟ್ಟಣದ ಅಮ್ಮಾಜಿ ಕೆರೆಯಿಂದ ಟಿಬೆಟನ್ ಕ್ಯಾಂಪ್ ಮಾರ್ಗದ ಹೆದ್ದಾರಿ ಪಕ್ಕದಲ್ಲಿರುವ ಮರಗಳು ಭಾಗಿದ್ದು, ವಾಹನಗಳ ಸವಾರರಿಗೆ ಸಮಸ್ಯೆಯಾಗಿವೆ.

ರಾಜ್ಯ ಹೆದ್ದಾರಿಯ ಎರಡೂ ಬದಿಗೆ ಇರುವ ಮರಗಳ ಬೇರುಗಳು ಸಡಿಲಗೊಂಡಿವೆ. ಜೋರಾದ ಗಾಳಿ, ಮಳೆ ಬೀಸಿದರೆ ಬೀಳುವ ಹಂತದಲ್ಲಿವೆ ಎಂದು ಪ್ರಯಾಣಿಕರು ದೂರುತ್ತಾರೆ.

ಅಮ್ಮಾಜಿ ಕೆರೆಯ ಹೆಚ್ಚುವರಿ ನೀರು ಹರಿದುಹೋಗಲು ರಸ್ತೆ ಬದಿಯಲ್ಲಿಯೇ ಕಾಲುವೆ ನಿರ್ಮಾಣ ಕೆಲ ವರ್ಷಗಳ ಹಿಂದೆ ಮಾಡಲಾಗಿತ್ತು. ಆಗ ಮರಗಳ ಬೇರು ಸಡಿಲಗೊಂಡಂತೆ ಎದ್ದು ಕಾಣುತ್ತಿವೆ. ಕಳೆದ ಮಳೆಗಾಲದಲ್ಲಿಯೂ ಗಾಳಿ, ಮಳೆಗೆ ಒಂದೆರೆಡು ಮರಗಳು ಧರೆಗುರುಳಿದ್ದವು. ಆಗ ಅರಣ್ಯ ಇಲಾಖೆಯವರು ಕೆಲವೊಂದಿಷ್ಟು ಮರಗಳನ್ನು ಕಡಿಸಿದ್ದರು. ಇನ್ನೂ ಕೆಲವು ಮರಗಳು ಇಂದೋ ನಾಳೆ ಎಂದು ದಿನಗಳನ್ನು ಎಣಿಸುವಂತ ಸ್ಥಿತಿಯಲ್ಲಿದ್ದು, ಸವಾರರಿಗೆ ಹಾನಿ ಉಂಟು ಮಾಡುವ ಮೊದಲೇ ಅಂತಹ ಮರಗಳ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

'ಟಿಬೆಟನ್ ಕ್ಯಾಂಪ್ ರಸ್ತೆಯ ತಟ್ಟಿಹಳ್ಳ ಕ್ರಾಸ್‌ನಿಂದ ಅಮ್ಮಾಜಿ ಕೆರೆವರೆಗೆ ಬೈಕ್ ಸವಾರರು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾಗಿದೆ. ಹಳೆಯ ಮರಗಳು ಒಂದಕ್ಕೊಂದು ತಾಗಿದ್ದು, ಯಾವಾಗ ಬೇಕಾದರೂ ಬೀಳಬಹುದು. ನಿತ್ಯವೂ ನೂರಾರು ವಾಹಗಳು ಈ ಮಾರ್ಗದಲ್ಲಿಯೇ ಸಂಚರಿಸುತ್ತವೆ. ಅನಾಹುತ ಸಂಭವಿಸುವ ಮೊದಲೇ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು' ಎಂದು ಸ್ಥಳೀಯ ನಿವಾಸಿ ರಾಘವೇಂದ್ರ ಶಿರಾಲಿ ಒತ್ತಾಯಿಸಿದರು.

'ಗಾಳಿ, ಮಳೆಗೆ ಮರದ ಕೊಂಬೆಗಳು ರಸ್ತೆ ಮೇಲೆ ಆಗಾಗ ಮುರಿದು ಬೀಳುತ್ತಿರುತ್ತವೆ. ಬೇರು ಸಡಿಲಗೊಂಡಿವೆ. ಹೆದ್ದಾರಿ ಪಕ್ಕ ಮರಗಳಿದ್ದರೆ ಒಳ್ಳೆಯದು. ಆದರೆ, ಸದೃಢವಾಗಿದ್ದ ಮರಗಳ ಬೇರು ಅವೈಜ್ಞಾನಿಕ ಕಾಲುವೆಯಿಂದ ಸಡಿಲಗೊಂಡಿದ್ದು ಮರಗಳು ಧರೆಗುರುಳುವುದರಲ್ಲಿ ಅನುಮಾನವಿಲ್ಲ' ಎನ್ನುತ್ತಾರೆ ರೈತ ಪರುಶುರಾಮ ರಾಣಿಗೇರ.

'ಮರಗಳ ತೆರವಿಗೆ ಕಳೆದ ವರ್ಷ ವರದಿ ಸಲ್ಲಿಸಲಾಗಿತ್ತು. ಅನುಮತಿ ಸಿಕ್ಕಿದ್ದ ಕೆಲ ಮರಗಳನ್ನು ಈ ಹಿಂದೆ ತೆರವುಗೊಳಿಸಲಾಗಿದ್ದು, ಇನ್ನೂ ಕೆಲ ಮರಗಳಿಗೆ ಅನುಮತಿ ದೊರೆತ ಕೂಡಲೇ ಕಟಾವು ಮಾಡಲಾಗುವುದು' ಎಂದು ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೋಳ್ಳಿ ಹೇಳಿದರು.

ಮುಂಡಗೋಡ-ಅಣಶಿ ರಾಜ್ಯ ಹೆದ್ದಾರಿ ಅಪಾಯ ಆಹ್ವಾನಿಸುತ್ತಿರುವ ಮರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.