ADVERTISEMENT

ಉತ್ತರ ಕನ್ನಡ: ಮರೆತುಹೋದ ಖಾದ್ಯಗಳ ರಸದೌತಣ

ಅಪರೂಪದ ಪಾಕವೈವಿಧ್ಯ ಸ್ಪರ್ಧೆಯಲ್ಲಿ ಸಿರಿಧಾನ್ಯದ ಘಮಲು

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:02 IST
Last Updated 14 ಜನವರಿ 2026, 7:02 IST
ಶಿರಸಿಯಲ್ಲಿ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಸ್ಪರ್ಧೆಯಲ್ಲಿ ಮಹಿಳೆಯರು ವಿವಿಧ ಖಾದ್ಯಗಳನ್ನು ಪ್ರದರ್ಶಿಸಿದರು
ಶಿರಸಿಯಲ್ಲಿ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಸ್ಪರ್ಧೆಯಲ್ಲಿ ಮಹಿಳೆಯರು ವಿವಿಧ ಖಾದ್ಯಗಳನ್ನು ಪ್ರದರ್ಶಿಸಿದರು   

ಶಿರಸಿ: ನಗರದ ಟಿಆರ್‌ಸಿ ಸಭಾಭವನವು ಮಂಗಳವಾರ ಅಪರೂಪದ ಪಾಕವೈವಿಧ್ಯ ಸ್ಪರ್ಧೆಗೆ ಸಾಕ್ಷಿಯಾಯಿತು. ಆಧುನಿಕ ಆಹಾರ ಪದ್ಧತಿಯ ನಡುವೆ ಸಾಂಪ್ರದಾಯಿಕ ಹಾಗೂ ಪೌಷ್ಟಿಕ ಆಹಾರಗಳ ಮಹತ್ವವನ್ನು ಸಾರುವಲ್ಲಿ ಈ ಸ್ಪರ್ಧೆ ಯಶಸ್ವಿಯಾಯಿತು.

ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಉತ್ತರಕನ್ನಡ ಸಾವಯವ ಒಕ್ಕೂಟದ ಸಹಯೋಗದಲ್ಲಿ ಆಯೋಜನೆಯಾಗಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಸ್ಪರ್ಧೆಯು ತಿಂಡಿ ಪ್ರಿಯರ ಬಾಯಲ್ಲಿ ನೀರೂರಿಸುವಂತಿತ್ತು. ‌

ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳ ಬಳಕೆ ಹಾಗೂ ಮರೆಯಾಗುತ್ತಿರುವ ಹಳೆಯ ಕಾಲದ ರುಚಿಯನ್ನು ಮರುಪರಿಚಯಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 165ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮರೆತುಹೋದ ಖಾದ್ಯಗಳು, ಸಿರಿಧಾನ್ಯದ ಖಾರ ಹಾಗೂ ಸಿರಿಧಾನ್ಯದ ಸಿಹಿ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ADVERTISEMENT

ನವಣೆ ಲಾಡು, ಸಾಮೆ ಕಡಬು, ರಾಗಿಸುಳಿ ಕಡಬು ಹಾಗೂ ಸಜ್ಜೆ ಉಂಡೆಗಳಂತಹ ಪೌಷ್ಟಿಕ ತಿಂಡಿಗಳು ಒಂದೆಡೆಯಾದರೆ, ಸಿರಿಧಾನ್ಯ ಪ್ಲಮ್ ಕೇಕ್ ಮತ್ತು ನೂಡಲ್ಸ್‌ನಂತಹ ಆಧುನಿಕ ಶೈಲಿಯ ಖಾದ್ಯಗಳು ಗಮನ ಸೆಳೆದವು. ಅಷ್ಟೇ ಅಲ್ಲದೆ, ಅಡಿಕೆ ಸಿಂಗಾರದ ಪಲ್ಯ, ಬಾಳೆಹಣ್ಣಿನ ಶಾವಿಗೆ, ಹಾಲು ಮಣ್ಣಿ, ಎರಿಯಪ್ಪೆ ಹಾಗೂ ಪಪ್ಪಾಳೆಕಾಯಿ ತಾಳಿಯಂತಹ ಗ್ರಾಮೀಣ ಸೊಗಡಿನ ತಿಂಡಿಗಳು ಹಳೆಯ ನೆನಪನ್ನು ಮರುಕಳಿಸುವಂತೆ ಮಾಡಿದವು.

​ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವಕರ ಮಾತನಾಡಿ, ‘ರೈತ ಮಹಿಳೆಯರಲ್ಲಿ ಸಿರಿಧಾನ್ಯಗಳ ಮಹತ್ವ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ವೇದಿಕೆ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ಕೋಟೆಮನೆ ಅವರು, ಸಿರಿಧಾನ್ಯಗಳು ಕೇವಲ ಮನೆಯ ಅಡುಗೆಗೆ ಸೀಮಿತವಾಗದೆ ಮೌಲ್ಯವರ್ಧನೆಗೊಂಡು ಮಾರುಕಟ್ಟೆಗೆ ಪ್ರವೇಶಿಸಬೇಕು. ಆ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ದಾರಿಯಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.