
ಕಾರವಾರ: ನಾಲ್ಕು ಕಂದಾಯ ಉಪವಿಭಾಗ ಒಳಗೊಂಡಿರುವ ಉತ್ತರ ಕನ್ನಡದಲ್ಲಿ ಕೇವಲ ಒಬ್ಬರೇ ಉಪವಿಭಾಗಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದು, ಮೂರು ಉಪವಿಭಾಗಗಳು ‘ಪ್ರಭಾರ’ ಆಡಳಿತದಲ್ಲಿ ನಡೆಯುವಂತಾಗಿದೆ. ಇದು ಆಡಳಿತಾತ್ಮಕ ಚಟುವಟಿಕೆಗಳ ವಿಳಂಬಕ್ಕೆ ಕಾರಣವಾಗುತ್ತಿದೆ ಎಂಬುದು ಜನರ ದೂರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪ್ರತಿನಿಧಿಸುವ ಕ್ಷೇತ್ರದಲ್ಲೇ ಉಪವಿಭಾಗಾಧಿಕಾರಿ ಹುದ್ದೆ ಖಾಲಿ ಉಳಿದು ಒಂದೂವರೆ ವರ್ಷ ಕಳೆದಿದೆ. ಮೂರು ಉಪವಿಭಾಗಾಧಿಕಾರಿ ಹುದ್ದೆ ಭರ್ತಿಗೆ ಆಸಕ್ತಿ ತೋರಿಸಿಲ್ಲ ಎಂಬ ಆರೋಪವನ್ನು ಸಚಿವರು ಎದುರಿಸುತ್ತಿದ್ದಾರೆ.
ಕಾರವಾರ, ಶಿರಸಿ, ಕುಮಟಾ ಮತ್ತು ಭಟ್ಕಳ ಉಪವಿಭಾಗ ಒಳಗೊಂಡಿರುವ ಇಲ್ಲಿ ಸದ್ಯ ಕುಮಟಾ ಉಪವಿಭಾಗಕ್ಕೆ ಮಾತ್ರ ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿ ಪಿ.ಶ್ರವಣಕುಮಾರ್ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಕಾರವಾರ ಉಪವಿಭಾಗದ ಹೆಚ್ಚುವರಿ ಹೊಣೆಗಾರಿಕೆಯನ್ನೂ ನೀಡಲಾಗಿದೆ. ಜೊತೆಗೆ ನೌಕಾನೆಲೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯ ಜವಾಬ್ದಾರಿಯನ್ನೂ ನಿಭಾಯಿಸಬೇಕಿದೆ.
ನಾಲ್ಕು ತಾಲ್ಲೂಕು ಒಳಗೊಂಡಿರುವ ಶಿರಸಿ ಮತ್ತು ಭಟ್ಕಳ ಉಪವಿಭಾಗಕ್ಕೆ ಉಪವಿಭಾಗಾಧಿಕಾರಿ ಇಲ್ಲದಂತಾಗಿದೆ. ಈಚೆಗಷ್ಟೆ ಶಿರಸಿ ಉಪವಿಭಾಗಾಧಿಕಾರಿಯಾಗಿದ್ದ ಕೆ.ಕಾವ್ಯರಾಣಿ ವರ್ಗಾವಣೆಗೊಂಡಿದ್ದು, ಅವರು ಒಂದೂವರೆ ವರ್ಷದಿಂದ ಭಟ್ಕಳ ಉಪವಿಭಾಗದ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. ಸದ್ಯ ಶಿರಸಿ ಉಪವಿಭಾಗಕ್ಕೆ ಮುಂಡಗೋಡ ತಹಶೀಲ್ದಾರ್, ಭಟ್ಕಳ ಉಪವಿಭಾಗಕ್ಕೆ ಹೊನ್ನಾವರ ತಹಶೀಲ್ದಾರ್ ಅವರನ್ನು ಪ್ರಭಾರ ಉಪವಿಭಾಗಾಧಿಕಾರಿಗಳಾಗಿ ನಿಯೋಜನೆ ಮಾಡಲಾಗಿದೆ.
‘ಉಪವಿಭಾಗಾಧಿಕಾರಿಗಳು ಕೇವಲ ಕಂದಾಯ ಇಲಾಖೆಯ ಜವಾಬ್ದಾರಿಯನ್ನಷ್ಟೇ ನಿಭಾಯಿಸುತ್ತಿಲ್ಲ. ಉಪವಿಭಾಗ ವ್ಯಾಪ್ತಿಯ ಎಲ್ಲ ಇಲಾಖೆಗಳ ಕಾರ್ಯನಿರ್ವಹಣೆಯ ಮೇಲೂ ನಿಗಾ ಇರಿಸಬೇಕಾಗುತ್ತದೆ. ಸಾರ್ವಜನಿಕರ ದೂರುಗಳಿಗೆ, ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಬೇಕಾಗುತ್ತದೆ. ಆದರೆ, ಉಪವಿಭಾಗಾಧಿಕಾರಿಗಳಿಲ್ಲದೆ ಆಡಳಿತ ಯಂತ್ರ ಕುಂಠಿತಗೊಂಡಿದೆ’ ಎಂದು ಸಾಮಾಜಿಕ ಕಾರ್ಯಕರ್ತ ನಾರಾಯಣ ಹೆಗಡೆ ದೂರಿದರು.
‘ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿ ಹುದ್ದೆಯನ್ನು ಉಪವಿಭಾಗಾಧಿಕಾರಿ, ತಹಶೀಲ್ದಾರ್‌ಗಳು ನಿಭಾಯಿಸಬೇಕಿದೆ. ಅವುಗಳ ಜೊತೆಗೆ ಕುಮಟಾ ಉಪವಿಭಾಗಾಧಿಕಾರಿ ಅವರಿಗೆ ಹಲವು ಹುದ್ದೆ ನಿಭಾಯಿಸುವ ಹೊಣೆಗಾರಿಕೆ ನೀಡಲಾಗಿದೆ. ಇದರಿಂದ ಉಪವಿಭಾಗಾಧಿಕಾರಿ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವ ಪ್ರಕರಣಗಳ ಇತ್ಯರ್ಥ, ರೈಲ್ವೆ, ನೌಕಾನೆಲೆ ಯೋಜನೆಗಳ ಭೂಸ್ವಾಧೀನ ಪ್ರಕರಣಗಳ ಹೆಚ್ಚುವರಿ ಪರಿಹಾರ ಪ್ರಕರಣದ ವಿಚಾರಣೆಗೆ ಸಮಸ್ಯೆ ಉಂಟಾಗಿದೆ. ಕಂದಾಯ ಇಲಾಖೆಯ ಕಾರ್ಯಚಟುವಟಿಕೆ ಮೇಲೂ ಪರಿಣಾಮ ಬೀರಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.