ADVERTISEMENT

ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಸ್ಥಾಪನೆ ತಡೆದ ಕಾಂಗ್ರೆಸ್: ರೂಪಾಲಿ ನಾಯ್ಕ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 3:03 IST
Last Updated 9 ಡಿಸೆಂಬರ್ 2025, 3:03 IST
ರೂಪಾಲಿ ನಾಯ್ಕ
ರೂಪಾಲಿ ನಾಯ್ಕ   

ಕಾರವಾರ: ‘ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಹಿಂದಿನ ಬಿಜೆಪಿ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಕಾಂಗ್ರೆಸ್ ಸರ್ಕಾರ ತಣ್ಣೀರು ಎರಚಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆರೋಪಿಸಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕ್ರಿಮ್ಸ್ ಹೊಸ ಕಟ್ಟಡಕ್ಕೆ ₹150 ಕೋಟಿ ಅನುದಾನ ಮಂಜೂರು ಮಾಡಿದ್ದರು. ಬಿಜೆಪಿ ಅವಧಿಯಲ್ಲೇ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆಯಾಗಿದೆ. ನಂತರ ಕಾಮಗಾರಿಗೆ ತಕ್ಕಂತೆ ಹಂತ ಹಂತವಾಗಿ ಪಾವತಿಯಾಗಿದೆ. ಇದನ್ನೇ ತಾವು ಅನುದಾನ ಮಂಜೂರು ಮಾಡಿಸಿದ್ದು ಎಂದು ಕಾಂಗ್ರೆಸ್ ಮುಖಂಡರು ಸುಳ್ಳು ಹೇಳುತ್ತ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಎಂಆರ್‌ಐ ಯಂತ್ರ ಸೌಲಭ್ಯಕ್ಕೆ ಶಾಸಕಿಯಾಗಿದ್ದಾಗ ಅನುದಾನ ಮಂಜೂರು ಮಾಡಿಸಿದ್ದೆ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದ್ದರೂ ಎಂಆರ್‌ಐ ಯಂತ್ರ ಸೌಲಭ್ಯ ಕಲ್ಪಿಸಿಲ್ಲ’ ಎಂದರು.

ADVERTISEMENT

‘ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ವಿವಿಧ ಸಮುದಾಯಗಳ ಸಮುದಾಯ ಭವನದ ಅಭಿವೃದ್ಧಿಗೆ ತಂದಿದ್ದ ಅನುದಾನವನ್ನು ರದ್ದುಪಡಿಸಿ, ಬೇರೆ ಕಡೆಗೆ ಬಳಕೆಗೆ ಈಗಿನ ಶಾಸಕರು ಪ್ರಯತ್ನ ನಡೆಸಿದ್ದಾರೆ. ದೇವಸ್ಥಾನಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರು ₹25 ಕೋಟಿ ಒದಗಿಸಿದ್ದರು. ಆ ಅನುದಾನವನ್ನು ಈಗಿನ ಶಾಸಕರು ಬದಲಿಸಿದ್ದಾರೆ’ ಎಂದು ದೂರಿದರು.

ಬಿಜೆಪಿ ರಾಜ್ಯ ಘಟಕದ ವಕ್ತಾರ ಹರಿಪ್ರಕಾಶ ಕೋಣೆಮನೆ, ‘ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಲ್ಲ, ಪ್ರಸೂತಿ ತಜ್ಞರಿಲ್ಲ. ಔಷಧಗಳ ಕೊರತೆ ಇದೆ. ಸರಿಯಾದ ರಸ್ತೆಯೂ ಇಲ್ಲದೆ ರೋಗಿಗಳನ್ನು ಹೊರಜಿಲ್ಲೆಯ ಆಸ್ಪತ್ರೆಗೆ ಸಾಗಿಸಲು ಅಡ್ಡಿಯಾಗುತ್ತಿದೆ’ ಎಂದರು.

ರಾಜ್ಯ ಕಾರಕಾರಿಣಿ ಸದಸ್ಯ ಕೆ.ಜಿ.ನಾಯ್ಕ, ಸುನೀಲ ಸೋನಿ, ಸಂಜಯ ಸಾಳುಂಕೆ, ರವಿರಾಜ್ ಅಂಕೋಲೆಕರ, ನಾಗೇಶ ಕುರ್ಡೇಕರ, ಸುಭಾಷ ಗುನಗಿ, ಇತರರು ಪಾಲ್ಗೊಂಡಿದ್ದರು.

ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುದಾನ ಒದಗಿಸುವ ಜೊತೆಗೆ ಅಗತ್ಯ ವೈದ್ಯಕೀಯ ಸಲಕರಣೆ ಖರೀದಿಗೆ ಕ್ರಮವಹಿಸಲಿ
ರೂಪಾಲಿ ನಾಯ್ಕ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.