ADVERTISEMENT

ಉತ್ತರ ಕನ್ನಡ | ಗೊಂದಲದ ನಡುವೆ ಸಮೀಕ್ಷೆ ಆರಂಭ

ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ: ನಿಯೋಜನೆಯಲ್ಲಿ ಅಧ್ವಾನದ ಆರೋಪ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 6:50 IST
Last Updated 23 ಸೆಪ್ಟೆಂಬರ್ 2025, 6:50 IST
ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಗೊಂಡಿರುವ ಕಾರವಾರ ತಾಲ್ಲೂಕಿನ ಶಿಕ್ಷಕಿಯರು ಗೊಂದಲದ ಕುರಿತು ತಹಶೀಲ್ದಾರ್ ನಿಶ್ಚಲ್ ನೊರ‍್ಹೋನಾ ಅವರೊಂದಿಗೆ ಚರ್ಚಿಸಿದರು
ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಗೊಂಡಿರುವ ಕಾರವಾರ ತಾಲ್ಲೂಕಿನ ಶಿಕ್ಷಕಿಯರು ಗೊಂದಲದ ಕುರಿತು ತಹಶೀಲ್ದಾರ್ ನಿಶ್ಚಲ್ ನೊರ‍್ಹೋನಾ ಅವರೊಂದಿಗೆ ಚರ್ಚಿಸಿದರು   

ಕಾರವಾರ: ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನೆಟ್‌ವರ್ಕ್ ಸಮಸ್ಯೆ, ಸಮೀಕ್ಷೆ ಆ್ಯಪ್‌ನ ತಾಂತ್ರಿಕ ತೊಂದರೆ, ನಿಯೋಜನೆಯಲ್ಲಿ ಉಂಟಾದ ಗೊಂದಲಗಳ ನಡುವೆಯೂ ಜಿಲ್ಲೆಯಲ್ಲಿ ಸೋಮವಾರ ಆರಂಭಗೊಂಡಿತು.

ಸಮೀಕ್ಷೆಗೆ ಜಿಲ್ಲೆಯಲ್ಲಿ 4.31 ಲಕ್ಷ ಮನೆಗಳನ್ನು ಗುರುತಿಸಲಾಗಿದೆ. 3,923 ಗಣತಿದಾರರನ್ನು ನಿಯೋಜಿಸಲಾಗಿದೆ. ಅವರ ಪೈಕಿ 3,687 ಮಂದಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಾಗಿದ್ದಾರೆ. ಅನ್ಯ ಇಲಾಖೆಗಳಿಂದ 236 ಮಂದಿಯನ್ನು ನಿಯೋಜಿಸಲಾಗಿದೆ. ಪ್ರತಿ 20 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರ ನಿಯೋಜನೆಯಾಗಿದೆ.

ಸಮೀಕ್ಷೆಗೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಈಗಾಗಲೆ ಎರಡು ಹಂತದ ತರಬೇತಿ ನೀಡಿದ್ದರ ನಡುವೆಯೂ ಸಮೀಕ್ಷೆಗೆ ಸಿದ್ಧಪಡಿಸಲಾದ ಮೊಬೈಲ್ ಆ್ಯಪ್ ಸೋಮವಾರವಷ್ಟೇ ಬಿಡುಗಡೆಗೊಂಡಿದ್ದರಿಂದ ಆ್ಯಪ್‌ ಬಳಕೆಯ ಬಗ್ಗೆ ಕೊನೆಯ ಸುತ್ತಿನ ತರಬೇತಿಯನ್ನು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಯಿತು. ಇದೇ ವೇಳೆ ಸಮೀಕ್ಷೆಗೆ ನಿಯೋಜಿಸಿದ ಪ್ರದೇಶಗಳ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಲಾಯಿತು.

ADVERTISEMENT

ಕೊನೆ ಕ್ಷಣದಲ್ಲಿ ಸಮೀಕ್ಷೆ ನಡೆಸುವ ಪ್ರದೇಶದ ಮಾಹಿತಿ ನೀಡಲಾಗಿದೆ. ತಾವು ಕಾರ್ಯನಿರ್ವಹಿಸುವ ಶಾಲೆಯ ವ್ಯಾಪ್ತಿ ಬಿಟ್ಟು ದೂರದ ಸ್ಥಳಗಳಿಗೆ ನಿಯೋಜನೆ ಮಾಡಲಾಗಿದೆ. ಇದು ಶಿಕ್ಷಕಿಯರಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಶಿಕ್ಷಕಿಯರು ಆಕ್ಷೇಪಿಸಿದರು. ಆಕ್ಷೇಪಣೆ ನಡುವೆಯೂ ಸಮೀಕ್ಷೆ ನಡೆಸುವವರಿಗೆ ನೀಡಲಾಗುವ ಕಿಟ್‌ಗಳನ್ನು ಹಂಚಿಕೆ ಮಾಡಿ ಸಮೀಕ್ಷೆಗೆ ಕಳುಹಿಸಲಾಯಿತು.

‘ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ನಗರ ಪ್ರದೇಶಕ್ಕೆ, ನಗರ ಪ್ರದೇಶದಲ್ಲಿನ ಶಿಕ್ಷಕರನ್ನು ಹಳ್ಳಿಗಳಿಗೆ ಸಮೀಕ್ಷೆ ಕೆಲಸಕ್ಕೆ ನಿಯೋಜಿಸಲಾಗಿದೆ. ಅಧಿಕಾರಿಗಳ ಬಳಿ ವಿಚಾರಿಸಿದರೆ ರಾಜ್ಯಮಟ್ಟದಲ್ಲೇ ತಂತ್ರಾಂಶ ಆಧರಿಸಿ ನಿಯೋಜನೆ ಕಾರ್ಯ ನಡೆದಿದೆ. ಮೊಬೈಲ್ ಸಂಖ್ಯೆ ನೋಂದಣಿಯಾಗಿರುವ ಆ್ಯಪ್‌ನೊಂದಿಗೆ ಮನೆ ಬಾಗಿಲಿಗೆ ಅಂಟಿಸಲಾದ ಸ್ಟಿಕ್ಕರ್ ಸಂಖ್ಯೆಗಳ ಜೋಡಣೆಯಾಗಿದ್ದು, ಈ ಆಧಾರದಲ್ಲಿ ಶಿಕ್ಷಕರನ್ನು ಸಮೀಕ್ಷೆಗೆ ಆಯಾ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎನ್ನುತ್ತಿದ್ದಾರೆ. ನಿಯೋಜನೆ ಪ್ರಕ್ರಿಯೆಯಲ್ಲೇ ಎಡವಟ್ಟು ನಡೆದಿದೆ’ ಎಂದು ಹಲವು ಶಿಕ್ಷಕರು ದೂರಿದರು.

‘ಕೆಲವರಿಗೆ 80 ಮನೆಗಳ ಸಮೀಕ್ಷೆಯ ಜವಾಬ್ದಾರಿ ಇದ್ದರೆ, ಕೆಲವರಿಗೆ 150 ಮನೆಗಳ ಜವಾಬ್ದಾರಿ ಹೊರಿಸಲಾಗಿದೆ. ನಿವೃತ್ತಿಯ ಅಂಚಿನಲ್ಲಿರುವವರನ್ನೂ ಸಮೀಕ್ಷೆಗೆ ನಿಯೋಜಿಸಿದ್ದಾರೆ. ಸಮೀಕ್ಷೆ ಕರ್ತವ್ಯದಿಂದ ವಿನಾಯಿತಿ ಕೋರಿದ್ದ ಅನಾರೋಗ್ಯ ಪೀಡಿತರನ್ನೂ ಸಮೀಕ್ಷೆಗೆ ಸಾಗುವಂತೆ ಕೊನೆಕ್ಷಣದಲ್ಲಿ ಆದೇಶ ಬಂದಿದೆ’ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಗೊಂಡವರಿಗೆ ಸರಾಸರಿ 110 ಮನೆಗಳ ಸಮೀಕ್ಷೆ ನಡೆಸುವ ಜವಾಬ್ದಾರಿ ಹಂಚಿಕೆಯಾಗಿದ್ದು ಶಿಕ್ಷಕರ ಹೊರತಾಗಿ ಅನ್ಯ ಇಲಾಖೆಗಳ ಸಿಬ್ಬಂದಿಯನ್ನೂ ನಿಯೋಜಿಸಿದ್ದೇವೆ
ಶಿವಕಕ್ಕ ಮಾದರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ

ನೆಟ್‌ವರ್ಕ್ ಇಲ್ಲದ ಸಮಸ್ಯೆ

‘ಸಮೀಕ್ಷೆ ಆ್ಯಪ್‌ನಲ್ಲಿ ನೀಡಲಾದ 60 ಪ್ರಶ್ನೆಗಳಿಗೆ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉತ್ತರ ಪಡೆದು ಭರ್ತಿ ಮಾಡಬೇಕು. ಸಮೀಕ್ಷೆ ಆರಂಭದಲ್ಲಿ ಕೊನೆಯಲ್ಲಿ ಕುಟುಂಬದ ಯಜಮಾನರ ಭಾವಚಿತ್ರ ಕ್ಲಿಕ್ಕಿಸಿ ಅಪ್ಲೋಡ್ ಮಾಡಬೇಕು. ಆದರೆ ಜಿಲ್ಲೆಯಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ ಸ್ಥಳಗಳೇ ಹೆಚ್ಚಿದ್ದು ಸಮೀಕ್ಷೆಗೆ ದೊಡ್ಡ ಸಮಸ್ಯೆಯಾಗಿದೆ. ಅಧಿಕಾರಿಗಳಿಂದ ಪರಿಹಾರ ಸಿಗುತ್ತಿಲ್ಲ’ ಎಂದು ಹಲವು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸಮೀಕ್ಷೆಗೆ ಜಿಲ್ಲೆಯಲ್ಲಿ 4.31 ಲಕ್ಷ ಮನೆಗಳನ್ನು ಗುರುತಿಸಿದ್ದು ಅವುಗಳ ಪೈಕಿ 57200 ಮನೆಗಳು ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿವೆ. ಅವುಗಳನ್ನು ನೆರಳಿನ ಪ್ರದೇಶ (ಶ್ಯಾಡೊ ಏರಿಯಾ) ಎಂದು ಪರಿಗಣಿಸಿದ್ದು ಅಂತಹ ಸ್ಥಳಗಳಿಗೆ ಸಮೀಪದಲ್ಲಿನ ನೆಟ್‌ವರ್ಕ್ ಪ್ರದೇಶಕ್ಕೆ ಕುಟುಂಬದ ಒಬ್ಬರನ್ನು ಗ್ರಾಮ ಆಡಳಿತಾಧಿಕಾರಿಗಳು ಕರೆತರಬೇಕು. ಸಮೀಕ್ಷೆದಾರರು ಅಲ್ಲಿಯೇ ಮಾಹಿತಿ ಪಡೆದು ಭರ್ತಿಮಾಡಬೇಕು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಕ್ಕ ಮಾದರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.