ADVERTISEMENT

ಬರೆದಂತೆ ಬದುಕಿದ ಸಾಹಿತಿ 'ವಿಷ್ಣು ನಾಯ್ಕ'

ಇಹಲೋಕ ತ್ಯಜಿಸಿದ ಪ್ರಕಾಶಕ ವಿಷ್ಣು ನಾಯ್ಕ

ಮೋಹನ ಹಬ್ಬು
Published 19 ಫೆಬ್ರುವರಿ 2024, 5:05 IST
Last Updated 19 ಫೆಬ್ರುವರಿ 2024, 5:05 IST
ಕಾರವಾರದಲ್ಲಿ ನಡೆದಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಸಾಹಿತಿ ವಿಷ್ಣು ನಾಯ್ಕ ಮಾತನಾಡಿದ್ದರು.
ಕಾರವಾರದಲ್ಲಿ ನಡೆದಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಸಾಹಿತಿ ವಿಷ್ಣು ನಾಯ್ಕ ಮಾತನಾಡಿದ್ದರು.   

ಕಾರವಾರ: ‘ತಾನು ಕಟ್ಟುವ ಕ್ರಿಯೆಯಲ್ಲಿ ತೊಡಗಿಕೊಂಡವ’...ಇದು ಸಾಹಿತಿ ವಿಷ್ಣು ನಾಯ್ಕ ಅವರು ಯಾವಾಗಲೂ ಹೇಳುತ್ತಿದ್ದ ಮಾತು. ಅದಕ್ಕೆ ತಕ್ಕಂತೆ ನಡೆದುಕೊಂಡವರು ಕೂಡ.

ಅಂದ ಹಾಗೆ ಅವರು ಕಟ್ಟಡ, ಸೌಧವನ್ನು ಕಟ್ಟಲಿಲ್ಲ. ಬದಲಾಗಿ ಶಿಸ್ತಿನ ಬದುಕು ಕಟ್ಟಿದರು, ಮಾನವೀಯ ಮೌಲ್ಯಗಳ ಸಮಾಜ ಕಟ್ಟಿದರು. ಹೊಸ ಸಾಹಿತಿಗಳಿಗೆ ಪ್ರೋತ್ಸಾಹಿಸುತ್ತ ಅಕ್ಷರಲೋಕವನ್ನು ಕಟ್ಟಿದರು.

ಮೈ ಮುಚ್ಚಲು ಒಳ್ಳೆಯ ಬಟ್ಟೆ, ಹಾಸಿ ಹೊದೆಯಲು ಕೌದಿಯೂ ಇಲ್ಲದ ಬಡತನದಲ್ಲಿ ಬಾಲ್ಯ ಕಳೆದ ಅವರು, ಚಳಿಯಿಂದ ರಕ್ಷಿಸಿಕೊಳ್ಳಲು ಗೋಣಿಚೀಲದೊಳಗೆ ಕಾಲು ಹಾಕಿ ಮಲಗುತ್ತಿದ್ದರು. ಅಂತಹ ಬಡತನದ ಬಾಲ್ಯ ಕಂಡರೂ ನಾಡಿನ ನಾಮಾಂಕಿತ ಸಾಹಿತಿಯಾಗಿ, ಪ್ರಕಾಶಕರಾಗಿ ಬೆಳೆದು ಬಂದ ದಾರಿಯೇ ಸೋಜಿಗ.

ADVERTISEMENT

ಐದು ದಶಕಗಳಿಗೂ ಹೆಚ್ಚು ಕಾಲದಿಂದ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ನುಡಿದಂತೆ, ಬರೆದಂತೆ ಬದುಕುವವರು ಅಪರೂಪ. ಆದರೆ, ವಿಷ್ಣು ನಾಯ್ಕ ಬರೆದಂತೆ ಬದುಕಿದವರು. ಅವರಲ್ಲಿ ಸ್ಪಷ್ಟ ನಿಲುವಿತ್ತು. ಗಂಭೀರ ವ್ಯಕ್ತಿತ್ವದ ಮೃದು ಮನಸ್ಸಿನ ಜೀವ ಅವರಾಗಿದ್ದರು. ಅವರ ನಿಲುವು ಸಮಾಜದ ಪರವಿತ್ತು. ಆಲೋಚನೆಗಳು ಪ್ರಗತಿ ಪರವಾಗಿದ್ದವು.

ದಾಂಡೇಲಿಯ ಜನತಾ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಕೆಲಸ ಆರಂಭಿಸಿ, ಅಂಕೋಲಾದ ಪಿ.ಎಂ ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದರು. ಸಾಹಿತ್ಯ ಕ್ಷೇತ್ರಕ್ಕೂ ನಿರಂತರ ಕೊಡುಗೆ ನೀಡುತ್ತ ಬಂದ ಅವರು ಅತ್ಯುತ್ತಮ ಸಂಘಟನಾಕಾರರೂ ಹೌದು. ಅಂಕೋಲಾದಂತಹ ಪುಟ್ಟ ಪಟ್ಟಣದಲ್ಲಿ ರಾಜ್ಯಮಟ್ಟದ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದರು. 

ತಾವು ಸ್ಥಾಪಿಸಿದ ರಾಘವೇಂದ್ರ ಪ್ರಕಾಶನದ ಮೂಲಕ ನಾಡಿನ ಹೆಸರಾಂತ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿದ್ದು, ಅವರ ಖ್ಯಾತಿಗೆ ಹಿಡಿದ ಕೈಗನ್ನಡಿ. ಯುವ ಸಾಹಿತಿಗಳ ಕೃತಿಗಳನ್ನೂ ಪ್ರಕಟಿಸಿ ಅವರನ್ನು ಬೆಂಬಲಿಸಿ ಅಕ್ಷರಲೋಕ ಶ್ರೀಮಂತಗೊಳಿಸಿದ್ದು ಅವರ ಘನತೆ.

ಅಂಕೋಲಾದ ಕರ್ನಾಟಕ ಸಂಘ, ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನಕ್ಕೆ ಜೀವನಾಡಿಯಾಗಿದ್ದವರು. ಹತ್ತಾರು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮನೆಯಲ್ಲಿ ವಸತಿ, ಊಟ ಒದಗಿಸಿ ಬೆಳೆಸಿದವರು. ಅವರ ಸಂಘಟನೆಯ ಪರಿಣಾಮ ಅಂಬಾರಕೊಡ್ಲದ ಸದಾನಂದ ವೇದಿಕೆ ರಂಗಭೂಮಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.