ಕುಮಟಾ: ‘ಚೌತಿ ಹಬ್ಬದ ಗಣಪತಿ ಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿರುವ ಆಸುಪಾಸಿನಲ್ಲೇ ಹಲವು ಹಗರಣಗಳಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಸರ್ಜನೆ ಸನ್ನಿಹಿತವಾಗಲಿದೆೆ' ಎಂದು ಬಿಜೆಪಿ ಮುಖಂಡ ವಿ.ಸುನೀಲ್‌ಕುಮಾರ್ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ‘ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಲಿ ಎಂದು ಬಿಜೆಪಿ ಬಯಸುವುದಿಲ್ಲ. ಆದರೆ ತಪ್ಪು ಮಾಡಿದ ಮುಖ್ಯಮಂತ್ರಿ ಅಧಿಕಾರ ತ್ಯಜಿಸಬೇಕು’ ಎಂದರು.
‘ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸಲು ಹಾಲಿನ ಬೆಲೆ ಸೇರಿದಂತೆ ಸರ್ಕಾರ ಬೆಲೆ ಏರಿಕೆ ಮೊರೆ ಹೋಗಿದೆ. ಜನ ಜೀವನಕ್ಕೆ ತೊಂದರೆ ಉಂಟಾಗುವ ಕಸ್ತೂರಿ ರಂಗನ್ ವರದಿಯನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗುವ ಬದಲು ಅದು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಚರ್ಚೆಗೊಳಪಡುವಂತೆ ನೋಡಿಕೊಳ್ಳಬೇಕು. ಸರ್ಕಾರದ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿರುವ ಸಾಧ್ಯತೆ ಇರುವುದರಿಂದ ಬಳ್ಳಾರಿ ಸಂಸದರ ಸದಸ್ಯತ್ವ ರದ್ದತಿಗೆ ಬಿಜೆಪಿ ಚುನಾವಣಾ ಆಯೋಗವನ್ನು ಆಗ್ರಹಿಸಲಿದೆ’ ಎಂದರು.
‘ರಾಜ್ಯದಲ್ಲಿ ಬಿಜೆಪಿ ಒಂದೂವರೆ ಕೋಟಿ ಸದಸ್ಯತ್ವದ ಗುರಿ ಹೊಂದಿದ್ದು, ನಮ್ಮ ಪಕ್ಷದಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಹತ್ವ ನೀಡಲಾಗುತ್ತದೆ' ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿದರು.
ಕುಮಟಾ ಶಾಸಕ ದಿನಕರ ಶೆಟ್ಟಿ, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಜಿ.ಐ. ಹೆಗಡೆ, ಮುಖಂಡರಾದ ಕುಬೇರಪ್ಪ, ಹರಿಪ್ರಕಾಶ ಕೋಣೆಮನೆ, ವೆಂಕಟೇಶ ನಾಯಕ, ಎಂ.ಜಿ.ನಾಯ್ಕ, ಮಾಜಿ ಶಾಸಕರಾದ ಸುನಿಲ ನಾಯ್ಕ, ಸುನಿಲ್ ಹೆಗಡೆ, ಪಕ್ಷದ ಜಿ.ಜಿ. ಹೆಗಡೆ, ಅಂತಮೂರ್ತಿ ಹೆಗಡೆ, ಪವನ ಶೆಟ್ಟಿ, ಕೆ.ಜಿ. ನಾಯ್ಕ, ಈಶ್ವರ ನಾಯ್ಕ, ಅನುರಧಾ ಭಟ್ಟ, ಆರತಿ ಗೌಡ, ಸುನಿಲ ನಾಯ್ಕ ಸೋನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.