ADVERTISEMENT

ಲಸಿಕೆ ಪಡೆದವರ ಮಾಹಿತಿ ಬಹಿರಂಗ!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈಯಕ್ತಿಕ ವಿವರಗಳು

ಸದಾಶಿವ ಎಂ.ಎಸ್‌.
Published 10 ಆಗಸ್ಟ್ 2021, 15:11 IST
Last Updated 10 ಆಗಸ್ಟ್ 2021, 15:11 IST
   

ಕಾರವಾರ: ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ಬಾಕಿ ಇರುವವರ ಹೆಸರು, ದೂರವಾಣಿ ಸಂಖ್ಯೆ ಹಾಗೂ ವಿಳಾಸಗಳ ಸಂಪೂರ್ಣ ವಿವರಗಳು ವಾಟ್ಸ್‌ಆ್ಯಪ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ತಮ್ಮ ಖಾಸಗಿತನಕ್ಕೆ ಧಕ್ಕೆಯಾಗಬಹುದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಲಸಿಕೆ ನೀಡುವ ಮೊದಲು ಫಲಾನುಭವಿಗಳ ವಿವರಗಳನ್ನು ಕಾರ್ಯ ನಿರತ ಸಿಬ್ಬಂದಿ ಭರ್ತಿ ಮಾಡುತ್ತಾರೆ. ಅದರಲ್ಲಿ ಅವರ ಜಿಲ್ಲೆ, ಲಸಿಕೆಗಾಗಿ ಸೃಜಿಸಲಾದ ಗುರುತಿನ ಸಂಖ್ಯೆ, ಲಸಿಕೆ ನೀಡಲಾಗುವ ಆಸ್ಪತ್ರೆಯ ಹೆಸರು, ಫಲಾನುಭವಿಯ ಹೆಸರು, ಮೊಬೈಲ್ ಫೋನ್‌ ಸಂಖ್ಯೆ, ಸಾಮಾನ್ಯ ನಾಗರಿಕರೇ ಅಥವಾ ಮುಂಚೂಣಿ ಕಾರ್ಯಕರ್ತರೇ, ಹುಟ್ಟಿದ ವರ್ಷ, ವಯಸ್ಸು, ಲಸಿಕೆ ಯಾವ ಕಂಪನಿಯದ್ದು, ಮೊದಲ ಡೋಸ್ ಪಡೆದ ದಿನಾಂಕ, ಎರಡನೇ ಡೋಸ್‌ ಪಡೆಯಲು ಅರ್ಹತೆ ಬರುವ ದಿನಾಂಕ, ಡೋಸ್‌ಗಳನ್ನು ಪಡೆದು ಆಗಿರುವ ದಿನಗಳ ವಿವರಗಳು ಇರುತ್ತವೆ. ಈ ಎಲ್ಲ ಮಾಹಿತಿಗಳಿರುವ ಎಕ್ಸೆಲ್ ಶೀಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಗುತ್ತಿವೆ.

‘ನಮ್ಮ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭಿಸುವುದನ್ನು ನಾವು ಬಯಸುವುದಿಲ್ಲ. ಇದರಿಂದ ಹಲವು ಅಕ್ರಮಗಳಿಗೆ ದಾರಿಯಾಗುವ ಸಾಧ್ಯತೆಯಿದೆ’ ಎಂದು ಎರಡನೇ ಡೋಸ್ ಲಸಿಕೆ ಪಡೆಯಲು ಕಾಯುತ್ತಿರುವ ಫಲಾನುಭವಿಯೊಬ್ಬರು ‘ಪ್ರಜಾವಾಣಿ’ ಜೊತೆ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಆನ್‌ಲೈನ್ ವಂಚಕರು ಇಂಥ ಸಂದರ್ಭಗಳಿಗೆ ಕಾಯುತ್ತಿರುತ್ತಾರೆ. ಈ ಹಿಂದೆ ಕೋವಿಡ್ ಸೋಂಕಿತರಾದ ಕೆಲವರ ಮಾಹಿತಿ ಪಡೆದ ಅಪರಿಚಿತರು, ಅವರ ಮೊಬೈಲ್‌ ಫೋನ್‌ಗಳಿಗೆ ಎಸ್.ಎಂ.ಎಸ್ ಸಂದೇಶ ಕಳುಹಿಸಿ ಜೀವವಿಮೆ ಮಾಡಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದರು. ನಮ್ಮ ಮೊಬೈಲ್ ಫೋನ್ ನಂಬರ್ ಹಾಗೂ ಕೋವಿಡ್ ಲಸಿಕೆಯ ಮಾಹಿತಿಯನ್ನು ಬಳಸಿಕೊಂಡು ಮತ್ತಿನ್ನೇನೋ ವಂಚನೆಗೆ ದಾರಿ ಆಗಲಾರದು ಎಂದು ಹೇಗೆ ಹೇಳಲು ಸಾಧ್ಯ? ನಮ್ಮ ವೈಯಕ್ತಿಕ ಮಾಹಿತಿಗಳನ್ನು ಸೋರಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಸರಿ ‍ಪಡಿಸಲು ಕ್ರಮ’:

‘ಜಿಲ್ಲೆಯಲ್ಲಿ 80 ಸಾವಿರ ಮಂದಿಗೆ ಎರಡನೇ ಡೋಸ್ ಕೊಡಬೇಕಿದೆ ಎಂದು ಲಸಿಕೆ ನೀಡಲು ಸಿದ್ಧಪಡಿಸಲಾದ ಪೋರ್ಟಲ್‌ನಲ್ಲಿ ತೋರಿಸ್ತಿದೆ. ಆದರೆ, ವಾಸ್ತವದಲ್ಲಿ ಅಷ್ಟೊಂದು ಬಾಕಿಯಿಲ್ಲ’ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಕೆಲವರು ಮೊದಲ ಡೋಸ್ ಪಡೆಯಲು ಒಂದು ಫೋನ್ ನಂಬರ್ ಕೊಟ್ಟಿದ್ದರೆ, ಎರಡನೇ ಡೋಸ್ ಪಡೆಯಲು ಮತ್ತೊಂದು ಫೋನ್ ನಂಬರ್ ನಮೂದಿಸಿದ್ದಾರೆ. ಮೊದಲ ಡೋಸ್‌ ಲಸಿಕೆಯನ್ನು ಒಂದು ಆದ್ಯತಾ ವಲಯದಿಂದ ಪಡೆದಿದ್ದರೆ, ಮತ್ತೊಮ್ಮೆ ಬೇರೊಂದು ಆದ್ಯತಾ ವಲಯದಿಂದ ಪಡೆದಿದ್ದಾರೆ. ಈ ಮಾಹಿತಿಗಳನ್ನು ಸರಿಪಡಿಸುವ ಸಲುವಾಗಿ ಪಟ್ಟಿ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

–––––

* ಜಿಲ್ಲೆಯ ಕೆಲವು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೇ ತಮ್ಮ ವಾರ್ಡ್‌ಗಳ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಬೇಜವಾಬ್ದಾರಿಯುತ ನಡೆ.

– ಹೆಸರು ಹೇಳಲು ಇಚ್ಛಿಸದ ನಾಗರಿಕ

* ಎರಡನೇ ಡೋಸ್ ಲಸಿಕೆಯ ಫಲಾನುಭವಿಗಳ ಮಾಹಿತಿ ಪಡೆದು ಕರೆ ಮಾಡಲಾಗುತ್ತಿದೆ. ಅವರ ಮಾಹಿತಿ ಎಲ್ಲಿಂದ ಸೋರಿಕೆಯಾಗಿದೆ ಎಂದು ತಿಳಿದು ಸರಿಪಡಿಸಲಾಗುವುದು.

– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.