ADVERTISEMENT

ಉತ್ತರ ಕನ್ನಡ: ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವೆಂಕಟೇಶ ಸಾಧನೆ

ಎಂ.ಜಿ.ನಾಯ್ಕ
Published 20 ಏಪ್ರಿಲ್ 2022, 19:30 IST
Last Updated 20 ಏಪ್ರಿಲ್ 2022, 19:30 IST
ಕೇರಳದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಪದಕ ಜಯಿಸಿದ ಕುಮಟಾದ ವೆಂಕಟೇಶ ಪ್ರಭು ಹೆಮ್ಮೆಯ ನಗು ಬೀರಿದರು
ಕೇರಳದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಪದಕ ಜಯಿಸಿದ ಕುಮಟಾದ ವೆಂಕಟೇಶ ಪ್ರಭು ಹೆಮ್ಮೆಯ ನಗು ಬೀರಿದರು   

ಕುಮಟಾ: ಸಾಲ ಮಾಡಿ ಪವರ್ ಲಿಫ್ಟಿಂಗ್ ಸಲಕರಣೆಗಳನ್ನು ಖರೀದಿಸಿ, ಕಠಿಣ ಪರಿಶ್ರಮ ಪಟ್ಟವರು ಪಟ್ಟಣದ ವೆಂಕಟೇಶ ಪ್ರಭು. ಈಚೆಗೆ ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯ 93 ಕೆ.ಜಿ. ವಿಭಾಗದಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಪದಕಗಳನ್ನು ಜಯಿಸಿ ಸಂಕಷ್ಟಗಳ ನಡುವೆ ಹೆಮ್ಮೆಯ ನಗು ಅರಳಿಸಿದ್ದಾರೆ.

40 ವರ್ಷದ ವೆಂಕಟೇಶ ಪ್ರಭು, ಸ್ಥಳೀಯ ಪುರಸಭೆಯಿಂದ ನಡೆಯುವ ಮುನ್ಸಿಪಲ್ ವ್ಯಾಯಾಮ ಶಾಲೆಯ ವಿದ್ಯಾರ್ಥಿ. ಕಾಲೇಜಿಗೆ ಹೋಗುವಾಗ ವಿಶ್ವವಿದ್ಯಾಲಯ ಮಟ್ಟದಲ್ಲಿ ಚಾಂಪಿಯನ್ ಆಗಿದ್ದವರು. ಓದು ಅರ್ಧಕ್ಕೆ ನಿಲ್ಲಿಸಿ ಜೀವನೋಪಾಯಕ್ಕೆ ಕಿರಾಣಿ ಅಂಗಡಿ ಇಟ್ಟುಕೊಂಡರು. ಸುಮಾರು 13 ವರ್ಷಗಳ ನಂತರ ಮತ್ತೆ ಪವರ್ ಲಿಫ್ಟಿಂಗ್‌ನತ್ತ ಮತ್ತೆ ಒಲವು ತೋರಿದರು. ರಾಜ್ಯಮಟ್ಟದ ಆರು ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ ಪದಕಗಳು, ‘ಸ್ಟ್ರಾಂಗ್ ಮ್ಯಾನ್’ ಬಿರುದು ಪಡೆದುಕೊಂಡರು. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡಿದ್ದರು.

‘ನಾನು ನಿತ್ಯ ಬೆಳಿಗ್ಗೆ, ಸಂಜೆ ವ್ಯಾಯಾಮ ಶಾಲೆಗೆ ಹೋದಾಗ ನನ್ನ ಹೆಂಡತಿ ಅಂಗಡಿ ವ್ಯವಹಾರ ನೋಡಿಕೊಳ್ಳುತ್ತಾರೆ. ಮುನ್ಸಿಪಲ್ ವ್ಯಾಯಾಮ ಶಾಲೆಯಲ್ಲಿ ತರಬೇತಿಗೆ ಬೇಕಾದ ಬಾರ್‌ಗಳು, ಪ್ಲೇಟ್‌ಗಳು ಇಲ್ಲ. ಹಳೆಯ ಮಾದರಿ ಸಲಕರಣೆಗಳಿಂದ ಕಠಿಣ ತರಬೇತಿ ಸಾಧ್ಯವಿಲ್ಲ. ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಧರಿಸುವ ದಿರಿಸುಗಳು ದುಬಾರಿ ಬೆಲೆಯವು. ಅವುಗಳ ಖರೀದಿಗೆ ನನ್ನಲ್ಲಿ ಹಣ ಸಾಕಾಗಲಿಲ್ಲ. ಆಗ, ನನ್ನ ಹೆಂಡತಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಲ್ಲಿ ಸಾಲ ಮಾಡಿ ಹಣ ಸಹಾಯ ಮಾಡಿದ್ದಾರೆ’ ಎಂದು ಹೇಳುತ್ತಾರೆ.

ADVERTISEMENT

‘ಒಬ್ಬ ಅತ್ಯುತ್ತಮ ಕ್ರೀಡಾಪಟುವಿನಲ್ಲಿ ಇರಬೇಕಾದ ಎಲ್ಲ ಗುಣಗಳು ವೆಂಕಟೇಶ ಪ್ರಭು ಅವರಲ್ಲಿವೆ. ಅವರ ಪರಿಶ್ರಮ, ತರಬೇತಿ ಇದೇ ರೀತಿ ಮುಂದುವರಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆಯುವುದು ಅವರಿಗೆ ಕಷ್ಟಕರವಲ್ಲ’ ಎಂದು ರಾಜ್ಯ ದೇಹದಾರ್ಢ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಷ್ಟ್ರೀಯ ತೀರ್ಪುಗಾರ ಜಿ.ಡಿ.ಭಟ್ಟ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಪ್ರಾಯೋಜಕರ ನಿರೀಕ್ಷೆಯಲ್ಲಿ...:

‘ನನ್ನ ಸ್ವಂತ ಸಲಕರಣೆಗಳನ್ನು ಮುನ್ಸಿಪಲ್ ವ್ಯಾಯಾಮ ಶಾಲೆಯಲ್ಲಿಯೇ ಇಟ್ಟಿದ್ದೇನೆ. ನಾನು ತರಬೇತಿಗೆ ಬಂದರೆ ವ್ಯಾಯಾಮ ಶಾಲೆಯ ಶಿಕ್ಷಕ ಗುರು ಉಪ್ಪಾರ, ಸ್ನೇಹಿತರು ಎಲ್ಲ ಸಲಕರಣೆಗಳನ್ನು ನನಗೆ ಬಿಟ್ಟು ಕೊಡುತ್ತಿರುವ ಔದಾರ್ಯಕ್ಕೆ ನಾನು ಋಣಿ. ನಿತ್ಯ ಮೊಳಕೆ ಕಾಳು, ಮೀನು, ಮೊಟ್ಟೆ, ಅನ್ನ, ಚಪಾತಿ ಹೊರತಾಗಿ ವಿಶೇಷ ಆಹಾರ ಸೇವನೆಯ ಸೌಲಭ್ಯಕ್ಕೆ ಸದ್ಯ ಯಾವ ಪ್ರಾಯೋಜಕರೂ ಲಭ್ಯವಾಗಿಲ್ಲ’ ಎಂದು ವೆಂಕಟೇಶ ಪ್ರಭು ಬೇಸರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.