ADVERTISEMENT

ಸಿಬ್ಬಂದಿ ಕೊರತೆ; ನಲುಗಿದ ಇಲಾಖೆ

ಅಂಕೋಲಾದ ಪಶು ಸಂಗೋಪನಾ ಇಲಾಖೆಯಲ್ಲಿ ಶೇ 27ರಷ್ಟು ಮಾತ್ರ ಭರ್ತಿ

ಮಾರುತಿ ಹರಿಕಂತ್ರ
Published 11 ಫೆಬ್ರುವರಿ 2021, 16:01 IST
Last Updated 11 ಫೆಬ್ರುವರಿ 2021, 16:01 IST
ಪಾರ್ವೋ ಸೋಂಕಿಗೆ ತುತ್ತಾಗಿರುವ ನಾಯಿಮರಿಗೆ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಹೆಗಡೆ ಚಿಕಿತ್ಸೆ ನೀಡುತ್ತಿರುವುದು
ಪಾರ್ವೋ ಸೋಂಕಿಗೆ ತುತ್ತಾಗಿರುವ ನಾಯಿಮರಿಗೆ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಹೆಗಡೆ ಚಿಕಿತ್ಸೆ ನೀಡುತ್ತಿರುವುದು   

ಅಂಕೋಲಾ: ತಾಲ್ಲೂಕಿನ ಪಶು ವೈದ್ಯ ಆಸ್ಪತ್ರೆ ಹಾಗೂ ಪಶು ಚಿಕಿತ್ಸಾಲಯಗಳು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ. ಮಂಜೂರಾದ ಹುದ್ದೆಗಳಲ್ಲಿ ಕೆಲವು ಮಾತ್ರ ಭರ್ತಿಯಾಗಿವೆ. ಮೂಕ ಜೀವಿಗಳ ಆರೋಗ್ಯ ಹದಗೆಟ್ಟರೆ ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ತೊಂದರೆ ಅನುಭವಿಸುವಂತಾಗಿದೆ.

ಮಂಜೂರಾದ ಒಟ್ಟು 44 ಕಾಯಂ ಹುದ್ದೆಗಳಲ್ಲಿ ಕೇವಲ 12 ಹುದ್ದೆಗಳು ಭರ್ತಿಯಾಗಿವೆ (ಶೇ.27.27ರಷ್ಟು). ತಾಲ್ಲೂಕು ಪಶು ಆಸ್ಪತ್ರೆಯನ್ನು ಒಳಗೊಂಡು ಅಗಸೂರು, ಹಿಲ್ಲೂರು, ಹಳವಳ್ಳಿ, ಹಾರವಾಡ, ಬಾಸಗೋಡ, ಅಡಿಗೋಣ, ರಾಮನಗುಳಿ ಮತ್ತು ಕೊಡ್ಲಗದ್ದೆಗಳಲ್ಲಿ ಪಶು ಚಿಕಿತ್ಸಾಲಯಗಳಿವೆ. ಇವುಗಳಲ್ಲಿ ಮೂರು ಪಶು ಚಿಕಿತ್ಸಾಲಯಗಳನ್ನು ಹೊರತುಪಡಿಸಿ ಉಳಿದೆಡೆ ಯಾವುದೇ ಕಾಯಂ ಸಿಬ್ಬಂದಿಯಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ‘ಡಿ’ ದರ್ಜೆ ನೌಕರರನ್ನು ನೇಮಿಸಿಕೊಂಡು ನಿರ್ವಹಣೆ ಮಾಡಲಾಗುತ್ತಿದೆ.

ಮಂಜೂರಾದ 12 ‘ಡಿ’ ದರ್ಜೆ ನೌಕರರಲ್ಲಿ ಕೇವಲ ಒಬ್ಬರು ಕಾಯಂ ನೌಕರರಾಗಿದ್ದಾರೆ. ಇವರ ಕೊರತೆಯಿಂದ ಜಾನುವಾರಿಗೆ ಕಿತ್ಸೆ ನೀಡುವ ಸಂದರ್ಭದಲ್ಲಿ ಸಹಾಯಕರಿಲ್ಲದೇ ಕಷ್ಟಪಡುವಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರು ಸಾಕಾಣಿಕೆ ಹೆಚ್ಚಿದೆ. ಅಂತಹ ಪ್ರದೇಶಗಳಲ್ಲಿ ಪಶುವೈದ್ಯ ಚಿಕಿತ್ಸೆಯ ಸಿಬ್ಬಂದಿ ಕೊರತೆ ಇರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.

ADVERTISEMENT

ನಾಯಿಗಳಲ್ಲಿ ‘ಪಾರ್ವೋ’:

ತಾಲ್ಲೂಕಿನಲ್ಲಿ ಜಾನುವಾರುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಲಂಪಿಸ್ಕಿನ್ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೆ, ನಾಯಿಗಳಲ್ಲಿ ಕಂಡುಬರುವ ‘ಪಾರ್ವೋ’ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ.

ಪ್ರತಿವರ್ಷ ಸಾಮಾನ್ಯವಾಗಿ ಚಳಿಗಾಲದ ಅಂತ್ಯದಲ್ಲಿ ಈ ಸೋಂಕು ಕಂಡು ಬರುತ್ತದೆ. ಸೋಂಕಿತ ನಾಯಿಯ ಬಾಯಲ್ಲಿ ಹುಣ್ಣುಗಳಾಗಿ ಕೀವು ಮಿಶ್ರಿತ ನೀರು ಸೋರುತ್ತದೆ. ಇದು ನಾಯಿಂದ ನಾಯಿಗೆ ಮಾತ್ರ ಹರಡುತ್ತದೆ.

‘ನಾಯಿಗಳಲ್ಲಿ ಪಾರ್ವೋ ಸೋಂಕು ಹೊಸತೇನಲ್ಲ. ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಿದ್ದು, ಮುಂದಿನ ವರ್ಷದಲ್ಲಿ ಲಸಿಕೆ ಕೊಳ್ಳಲು ಅನುದಾನಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ ಹೆಗಡೆ ತಿಳಿಸಿದ್ದಾರೆ.

–––––

* ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ. ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ನೇಮಕಾತಿಯ ವಿಶ್ವಾಸದಲ್ಲಿದ್ದೇವೆ‌.

– ಡಾ.ಕೃಷ್ಣಮೂರ್ತಿ ಹೆಗಡೆ, ಸಹಾಯಕ ನಿರ್ದೇಶಕ, ಪಶು ಸಂಗೋಪನೆ ಇಲಾಖೆ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.