
ಶಿರಸಿ: ‘ಗ್ರಾಮದ ಅಭಿವೃದ್ಧಿಯು ಜನರ ಕೈಯಲ್ಲೇ ಇದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೂಲಿಯ ಜತೆಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಸಾಧ್ಯ’ ಎಂದು ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ ಹೇಳಿದರು.
ಉಂಚಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಿ ಗ್ರಾಮದ ಸರ್ವೆ ನಂಬರ್ 49ರಲ್ಲಿ ನರೇಗಾ ಯೋಜನೆಯಡಿ ಅಂದಾಜು ₹3 ಲಕ್ಷ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುವುದು ಮಾತ್ರವಲ್ಲದೆ, ಕೊಳವೆಬಾವಿ ಮರುಪೂರ್ಣ, ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಲಭ್ಯತೆ ಹಾಗೂ ಸಸ್ಯ ಸಂಪನ್ಮೂಲಗಳ ವೃದ್ಧಿಗೆ ಸಹಕಾರಿಯಾಗಲಿದೆ’ ಎಂದರು.
‘ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯವಾಗಿದ್ದು, ನಿಯಮಾನುಸಾರ ಎರಡು ಫೋಟೊಗಳನ್ನು ಸಲ್ಲಿಸಿದರೆ ಮಾತ್ರ ಕೂಲಿ ಪಾವತಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಹಾಜರಾತಿ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸಬೇಕು’ ಎಂದು ಸೂಚನೆ ನೀಡಿದರು. ಇದೇ ವೇಳೆ ಕೂಲಿಕಾರರೊಂದಿಗೆ ಕೇಕ್ ಕತ್ತರಿಸಿ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿದರು.
ಪಿಡಿಒ ಹರ್ಷ ರಾಥೋಡ್, ತಾಂತ್ರಿಕ ಸಂಯೋಜಕ ಕಾರ್ತಿಕ ಹಬ್ಭು, ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ತಾಂತ್ರಿಕ ಸಹಾಯಕ ವಿನೋದ ಪಟಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.