ADVERTISEMENT

ರಸ್ತೆ ದುರವಸ್ಥೆ: ಗ್ರಾಮಸ್ಥರ ಹಿಡಿಶಾಪ

ಮೂರು ತಾಲ್ಲೂಕು ಸಂಪರ್ಕಿಸುವ ಪ್ರಮುಖ ಮಾರ್ಗದ ದುರಸ್ತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 15:17 IST
Last Updated 6 ಆಗಸ್ಟ್ 2021, 15:17 IST
ಶಿರಸಿ ತಾಲ್ಲೂಕಿನ ಬಿಸಲಕೊಪ್ಪ ಗ್ರಾಮದಲ್ಲಿ ರಸ್ತೆ ಹಾಳಾಗಿದೆ
ಶಿರಸಿ ತಾಲ್ಲೂಕಿನ ಬಿಸಲಕೊಪ್ಪ ಗ್ರಾಮದಲ್ಲಿ ರಸ್ತೆ ಹಾಳಾಗಿದೆ   

ಶಿರಸಿ: ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳನ್ನು ಶಿರಸಿ ತಾಲ್ಲೂಕಿಗೆ ಸಂಪರ್ಕಿಸುವ ಬಿಸಲಕೊಪ್ಪ–ಬೆಡಸಗಾಂವ ಮುಖ್ಯ ರಸ್ತೆ ಅತಿವೃಷ್ಟಿಗೆ ಸಂಪೂರ್ಣದುಃಸ್ಥಿತಿಗೆ ತಲುಪಿದೆ.

ಶಿರಸಿ–ಹುಬ್ಬಳ್ಳಿ ಮುಖ್ಯ ರಸ್ತೆಯಿಂದ ಬಿಸಲಕೊಪ್ಪ ಗ್ರಾಮದ ಮೂಲಕ ಹತ್ತಾರು ಗ್ರಾಮಗಳನ್ನು ಸಂಪರ್ಕಿಸುವ ಜತೆಗೆ ಎರಡು ತಾಲ್ಲೂಕುಗಳಿಗೆ ಸಂಪರ್ಕ ಕೊಂಡಿಯಂತಿರುವ ರಸ್ತೆಯಲ್ಲಿ ಸಾಗುವುದೇ ಈಗ ಸವಾಲಾಗಿದೆ.

ಡಾಂಬರು ರಸ್ತೆಯಲ್ಲಿ ಈಗ ಹೊಂಡಗಳದ್ದೇ ದರ್ಬಾರು. ಅಲ್ಲಲ್ಲಿ ಕೆಸರು ಗುಂಡಿಯಾಗಿ ಪರಿಣಮಿಸಿದೆ. ಸಂಚಾರಕ್ಕೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಕೆಲವು ಕಡೆ ಗ್ರಾಮಸ್ಥರು ರಸ್ತೆಗೆ ಹಸಿ ಸೊಪ್ಪು ಹಾಕಿಟ್ಟಿದ್ದಾರೆ.

ADVERTISEMENT

ಬಿಸಲಕೊಪ್ಪ, ಕೊಪ್ಪ, ಉಲ್ಲಾಳ, ಬೆಡಸಗಾಂವ, ಕೊಪ್ಪದಗದ್ದೆ ಸೇರಿ ಹಲವು ಗ್ರಾಮಗಳ ಜನರಿಗೆ ಸಂಚಾರಕ್ಕೆ ಇರುವ ಏಕೈಕ ಮಾರ್ಗ ಇದಾಗಿದೆ. ಪ್ರತಿನಿತ್ಯ ನೂರಾರು ಜನರು ಓಡಾಟ ನಡೆಸುವ ರಸ್ತೆ ದುರವಸ್ಥೆಗೆ ತಲುಪಿದ್ದು ಗ್ರಾಮಸ್ಥರು ಹಿಡಿಶಾಪ ಹಾಕುತ್ತ ರಸ್ತೆಯಲ್ಲಿ ಸಾಗುತ್ತಿದ್ದಾರೆ.

‘ಮೂರ್ನಾಲ್ಕು ವರ್ಷದಿಂದಲೂ ರಸ್ತೆ ಹೊಂಡಮಯವಾಗಿಯೇ ಉಳಿದುಕೊಂಡಿದೆ. ಈಚೆಗೆ ಸುರಿದ ಮಳೆಗೆ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಬಿಸಲಕೊಪ್ಪದಿಂದ ಉಲ್ಲಾಳದ ವರೆಗೆ ಸುಮಾರು 4 ಕಿ.ಮೀ. ರಸ್ತೆ ಸಂಚಾರಕ್ಕೆ ಬಾರದಷ್ಟು ಮಾರ್ಪಟ್ಟಿದೆ’ ಎನ್ನುತ್ತಾರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶೇಷಗಿರಿ ಹೆಗಡೆ.

‘ನೂರಾರು ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ ತೆರಳುತ್ತಾರೆ. ಮೂರು ತಾಲ್ಲೂಕುಗಳ ನಡುವೆ ಸಂಪರ್ಕ ಕೊಂಡಿಯಾಗಿರುವ ಕಾರಣಕ್ಕೆ ವಾಹನಗಳ ಓಡಾಟವೂ ಹೆಚ್ಚು. ಹೀಗಾಗಿ ಕೂಡಲೆ ರಸ್ತೆ ದುರಸ್ತಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಬಿಸಲಕೊಪ್ಪ–ಉಲ್ಲಾಳ ರಸ್ತೆ ದುರಸ್ಥಿಗೆ ₹60 ಲಕ್ಷ ಮೀಸಲಿಟ್ಟಿದ್ದೇವೆ. ಮಳೆ ಕಡಿಮೆಯಾದ ಬಳಿಕ ಕೆಲಸ ಆರಂಭಿಸುತ್ತೇವೆ’ ಎಂದು ಪಂಚಾಯತರಾಜ್ ಎಂಜಿನಿಯರಿಂಗ್ ಶಿರಸಿ ಉಪವಿಭಾಗದ ಎಇಇ ರಾಮಚಂದ್ರ ಗಾಂವಕರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.