ADVERTISEMENT

ಅಘನಾಶಿನಿಗೆ ಕಿಂಡಿ ಅಣೆಕಟ್ಟೆ ನಿರ್ಮಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 14:51 IST
Last Updated 13 ಸೆಪ್ಟೆಂಬರ್ 2021, 14:51 IST

ಕಾರವಾರ: ‘ಬೇಸಿಗೆಯಲ್ಲಿ ಅಘನಾಶಿನಿ ನದಿಯಲ್ಲಿ ಉಪ್ಪು ನೀರು ಹರಿಯುವ ಕಾರಣ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಪರಿಹರಿಸಲು ಕಿಂಡಿ ಅಣೆಕಟ್ಟೆ ನಿರ್ಮಿಸಿಕೊಡಬೇಕು’ ಎಂದು ಕುಮಟಾ ತಾಲ್ಲೂಕಿನ ವಿವಿಧ ಗ್ರಾಮಗಳ ನಿವಾಸಿಗಳು ಒತ್ತಾಯಿಸಿದ್ದಾರೆ.

ಹೆಬೈಲ್, ಮಳವಳ್ಳಿ, ಶಿರಗುಂಜಿ, ಉಪ್ಪಿನಪಟ್ಟಣ, ಬೆಳ್ಳಂಗಿ, ಯಾಣ, ಕತಗಾಲ, ದೀವಗಿ, ಕಲ್ಲಬ್ಬೆ, ಬೊಗ್ರಿಬೈಲ್, ಸೊಪ್ಪಿನಹೊಸಳ್ಳಿ, ಸಂತೆಗುಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ನಮ್ಮ ಗ್ರಾಮಗಳಲ್ಲಿ ಅಡಿಕೆ ಮತ್ತು ತೆಂಗು ಹೆಚ್ಚು ಬೆಳೆಯುತ್ತದೆ. ನಮ್ಮ ಗ್ರಾಮಗಳ ಭಾಗದಲ್ಲಿ ಅಘನಾಶಿನಿ ನದಿಯು ಹರಿಯುತ್ತದೆ. ಆದರೆ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನದಿಯಲ್ಲಿ ಹರಿವು ಕಡಿಮೆಯಾಗುತ್ತದೆ. ನದಿಯಲ್ಲಿ ಸಮುದ್ರದ ಉಪ್ಪುನೀರು ವ್ಯಾಪಿಸಿಕೊಳ್ಳುತ್ತದೆ. ಆಗ ಅನಿವಾರ್ಯವಾಗಿ ಕೃಷಿಗೆ ಅದೇ ನೀರನ್ನು ಹರಿಸಬೇಕಾಗುತ್ತದೆ. ಇದರ ಪರಿಣಾಮ ಅಡಿಕೆ, ತೆಂಗಿನ ಮರಗಳು ಕೃಷವಾಗುತ್ತಿವೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ತೋಟಕ್ಕೆ ಉಪ್ಪು ನೀರು ಹಾಯಿಸುವ ಕಾರಣ ಕೆರೆ, ಬಾವಿಗಳಲ್ಲಿ ಅಂತರ್ಜಲವೂ ಉಪ್ಪಾಗುತ್ತಿದೆ. ಹಾಗಾಗಿ ಕುಡಿಯುವ ನೀರಿಗೂ ಕೊರತೆಯಾಗುತ್ತಿದೆ. ಕಳೆದ ವರ್ಷ ಸೇತುವೆ ನಿರ್ಮಾಣಕ್ಕೆಂದು ಬೊಗ್ರಿಬೈಲ್ ಮತ್ತು ತೊಪ್ಪಲಗುತ್ತ ಮಧ್ಯದಲ್ಲಿ ನದಿಗೆ ಮಣ್ಣು ತುಂಬಲಾಗಿತ್ತು. ಆಗ ಉಪ್ಪು ನೀರಿನ ಹರಿವು ಮೇಲಿನ ಭಾಗಕ್ಕೆ ಹೋಗಿರಲಿಲ್ಲ. ಇದರಿಂದಾಗಿ ಸುತ್ತಮುತ್ತಲ ಗ್ರಾಮಗಳ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಿತ್ತು. ಸಿಹಿ ನೀರಿಗೆ ಕೊರತೆಯಾಗಿರಲಿಲ್ಲ. ಮೇ ಕೊನೆಯವರೆಗೂ ತೋಟಗಳಿಗೆ ನೀರಿನ ಸಮಸ್ಯೆ ಎದುರಾಗಿರಲಿಲ್ಲ’ ಎಂದು ಉಲ್ಲೇಖಿಸಿದ್ದಾರೆ.

‘ಈ ಸನ್ನಿವೇಶವನ್ನು ಮನಗಂಡು ಇಲ್ಲಿ ಕಿಂಡಿ ಅಣೆಕಟ್ಟೆಯನ್ನು ನಿರ್ಮಿಸಬೇಕು. ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಗ್ರಾಮಗಳಿಗೆ ಸಿಹಿ ನೀರು ಸಿಗುವಂಥ ಯೋಜನೆ ಜಾರಿ ಮಾಡಲು ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಗಣಪತಿ ನಾಯ್ಕ, ಮಂಜುನಾಥ ಗೌಡ, ವಿಷ್ಣು ಗೌಡ, ವಿನಾಯಕ ನಾಯ್ಕ, ಬಲಿಯಾ ಗೌಡ, ಹೆಮ್ಮು ನಾಗು ಮುಕ್ರಿ, ಶ್ರೀಧರ ಪೈ, ಭೈರವೇಶ್ವರ ಭಟ್ಟ ಸೇರಿದಂತೆ ಹತ್ತಾರು ಗ್ರಾಮಸ್ಥರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.