ADVERTISEMENT

ಕುಮಟಾ| ಸೇತುವೆ ಏರಲು ಅಡಿಕೆ ಮರದ ರ‍್ಯಾಂಪ್!

ಕುಮಟಾ: ಅಘನಾಶಿನಿ ನದಿ ಪ್ರವಾಹಕ್ಕೆ ಕೊಚ್ಚಿ ಹೋಗುವ ಮರದ ಏಣಿ

ಎಂ.ಜಿ.ನಾಯ್ಕ
Published 15 ಮೇ 2022, 19:30 IST
Last Updated 15 ಮೇ 2022, 19:30 IST
ಕುಮಟಾ ತಾಲ್ಲೂಕಿನ ಬೊಗರಿಬೈಲ ಬಳಿ ಅಘನಾಶಿನಿ ನದಿಗೆ ಹೊಸದಾಗಿ ನಿರ್ಮಿಸಿದ ಸೇತುವೆ ಏರಲು ಸ್ಥಳೀಯರು ಶ್ರಮದಾನದ ಮೂಲಕ ಅಡಿಕೆ ಮರದ ರ್‍ಯಾಂಪ್ ನಿರ್ಮಿಸಿಕೊಂಡಿರುವುದು
ಕುಮಟಾ ತಾಲ್ಲೂಕಿನ ಬೊಗರಿಬೈಲ ಬಳಿ ಅಘನಾಶಿನಿ ನದಿಗೆ ಹೊಸದಾಗಿ ನಿರ್ಮಿಸಿದ ಸೇತುವೆ ಏರಲು ಸ್ಥಳೀಯರು ಶ್ರಮದಾನದ ಮೂಲಕ ಅಡಿಕೆ ಮರದ ರ್‍ಯಾಂಪ್ ನಿರ್ಮಿಸಿಕೊಂಡಿರುವುದು   

ಕುಮಟಾ: ತಾಲ್ಲೂಕಿನ ಅಘನಾಶಿನಿ ನದಿಗೆ ನಿರ್ಮಿಸಲಾಗಿರುವ ಐಗಳಕುರ್ವೆ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯ ಮುಗಿಯದೇ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ.

ಕಲ್ಲಬ್ಬೆ, ಅಳಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಗರಿಬೈಲ– ಉಪ್ಪಿನಪಟ್ಟಣ ಧಕ್ಕೆ ಮತ್ತು ಕೊಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಳಕುರ್ವೆಗೆ ಸೇತುವೆಯು ಸಂಪರ್ಕ ಕಲ್ಪಿಸುತ್ತದೆ.

ತಲಾ ₹ 17 ಕೋಟಿ ವೆಚ್ಚದ ಎರಡೂ ಸೇತುವೆ ಕಾಮಗಾರಿಗೆ ಕಳೆದ ಬಾರಿ ಕಾಂಗ್ರೆಸ್ ಪ‍ಕ್ಷದ ನೇತೃತ್ವದ ಸರ್ಕಾರದ ಅವಧಿಯಲ್ಲಿ ಶಿಲಾನ್ಯಾಸ ಮಾಡಲಾಗಿತ್ತು. ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿದು ಜನರ ಓಡಾಟಕ್ಕೆ ಬಿಟ್ಟುಕೊಡಬೇಕಿತ್ತು. ಆದರೆ, ಅದರ ಸಂಪರ್ಕ ರಸ್ತೆ ನಿರ್ಮಾಣ ಮಾತ್ರ ಹಾಗೇ ಉಳಿದಿದೆ. ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಬೊಗರಿಬೈಲ ಹಾಗೂ ಉಪ್ಪಿನಪಟ್ಟಣ ಧಕ್ಕೆಯ ಗ್ರಾಮಸ್ಥರಿಗೆ ಸರ್ಕಾರವು ಪರಿಹಾರ ವಿತರಿಸಿದೆ.

ADVERTISEMENT

ಈಗ ಸೇತುವೆಗೆ ಸುಣ್ಣ ಬಳಿದು ಹಾಗೇ ಬಿಡಲಾಗಿದೆ. ಬೊಗರಿಬೈಲ ಗ್ರಾಮಸ್ಥರು ಸುಮಾರು ₹ 25 ಸಾವಿರ ವೆಚ್ಚದಲ್ಲಿ ತಾವೇ ಶ್ರಮದಾನ ಮೂಲಕ ಸೇತುವೆಯ ಎರಡೂ ಬದಿಗೆ ಅಡಿಕೆ ಮರದ ರ‍್ಯಾಂಪ್ ನಿರ್ಮಿಸಿಕೊಂಡು ಸಂಚರಿಸುತ್ತಿದ್ದಾರೆ. ಆದರೆ, ಅದು ಮಳೆಗಾಲದಲ್ಲಿ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದು, ಸೇತುವೆಯ ಸಂಪ‍ರ್ಕವು ತಾತ್ಕಾಲಿಕವಾಗಿ ಕಡಿದುಹೋಗುತ್ತಿದೆ.

‘ಈ ವರ್ಷವಾದರೂ ಸೇತುವೆ ಕಾಮಗಾರಿ ಮುಗಿದು ಅನುಕೂಲ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಸೇತುವೆ ಬಳಸಿ ಸಂಪರ್ಕಿಸಬಹುದಾಗಿದ್ದ ನಾಲ್ಕಾರು ಕಿ.ಮೀ. ಅಂತರದ ಗ್ರಾಮಗಳಿಗೆ 25 ಕಿ.ಮೀ ಸುತ್ತುವರಿದು ಹೋಗಬೇಕಿದೆ’ ಎಂದು ಸಾಂತೂರು ಗ್ರಾಮದ ಕೃಷಿಕ ಎಸ್.ಎಂ. ಭಟ್ಟ ಹಾಗೂ ನಿವೃತ್ತ ಎಂಜಿನಿಯರ್ ಕಲ್ಲಬ್ಬೆ ಗ್ರಾಮದ ಆರ್.ಜಿ. ಭಟ್ಟ ಬೇಸರ ವ್ಯಕ್ತಪಡಿಸಿದ್ದಾರೆ.

‘ಐಗಳಕುರ್ವೆ ಹಾಗೂ ಕೊಡಕಣಿ ಭಾಗದ ಸಂಪರ್ಕ ರಸ್ತೆಗಾಗಿ ಭೂ ಸ್ವಾಧೀನ ಮಾಡಿಕೊಂಡ ಜಾಗದ ಕೆಲವು ಮಾಲೀಕರಿಗೆ ಪರಿಹಾರ ನೀಡಲಾಗಿದೆ. ಇನ್ನೂ ಕೆಲವರಿಗೆ ಬಾಕಿಯಿದೆ ಎನ್ನುವ ಕಾರಣಕ್ಕೆ ಸಂಪರ್ಕ ರಸ್ತೆ ಕಾಮಗಾರಿ ಮುಗಿದಿಲ್ಲ ಎಂದು ಕಾಮಗಾರಿ ನಡೆಸುವ ಎಂಜಿನಿಯರ್‌ಗಳು ಹೇಳುತ್ತಾರೆ. ನಾವು ಸದ್ಯ ಸೇತುವೆ ಏರಿ ಇಳಿಯಲು ಅಡಿಕೆ ಮರದ ರ‍್ಯಾಂಪ್ ನಿರ್ಮಿಸಿಕೊಂಡಿದ್ದೇವೆ’ ಎಂದು ಐಗಳಕುರ್ವೆ ಗ್ರಾಮದ ಮೋಹನ ಪಟಗಾರ ತಿಳಿಸಿದರು.

ಕಾಮಗಾರಿ ನಡೆಸುವ ಡಿ.ಆರ್.ಎನ್ ಕಂಪನಿ ಹಾಗೂ ಸಂಪರ್ಕ ರಸ್ತೆ ನಿರ್ಮಿಸುವ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳ ಸಂಪರ್ಕಿಸಿ ಮಾಹಿತಿ ಪಡೆಯಲು ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.