ADVERTISEMENT

ಪಾಲನೆಯಾಗದ ಆದೇಶ: ನಿಷೇಧದ ನಡುವೆಯೂ ಹೆಚ್ಚಿದ ಬೆಳಕಿನ ಮೀನುಗಾರಿಕೆ

ಗಣಪತಿ ಹೆಗಡೆ
Published 14 ಜನವರಿ 2024, 8:27 IST
Last Updated 14 ಜನವರಿ 2024, 8:27 IST
ಕಾರವಾರದ ಬೈತಕೋಲ ಬಂದರಿನಲ್ಲಿ ಲಂಗರು ಹಾಕಿದ್ದ ಪರ್ಸಿನ್ ಬೋಟ್‍ವೊಂದರಲ್ಲಿ ಬೆಳಕಿನ ಮೀನುಗಾರಿಕೆ ನಡೆಸಲು ಬಳಸಿದ್ದ ಪರಿಕರಗಳಿದ್ದವು
ಕಾರವಾರದ ಬೈತಕೋಲ ಬಂದರಿನಲ್ಲಿ ಲಂಗರು ಹಾಕಿದ್ದ ಪರ್ಸಿನ್ ಬೋಟ್‍ವೊಂದರಲ್ಲಿ ಬೆಳಕಿನ ಮೀನುಗಾರಿಕೆ ನಡೆಸಲು ಬಳಸಿದ್ದ ಪರಿಕರಗಳಿದ್ದವು    

ಕಾರವಾರ: ಅವೈಜ್ಞಾನಿಕ ಪದ್ಧತಿ ಎಂಬ ಕಾರಣಕ್ಕೆ ಬೆಳಕಿನ ಮೀನುಗಾರಿಕೆ ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಕದ್ದುಮುಚ್ಚಿ ನಡೆಯುತ್ತಿದ್ದ ಬೆಳಕಿನ ಮೀನುಗಾರಿಕೆಯು ಈಗ ಮುಕ್ತವಾಗಿ ನಡೆಯುತ್ತಿರುವ ಆರೋಪ ಬಲವಾಗಿ ಕೇಳಿಬಂದಿದೆ.

ಬೈತಕೋಲದ ಮೀನುಗಾರಿಕೆ ಬಂದರಿನಲ್ಲಿ ಬೆಳಕಿನ ಮೀನುಗಾರಿಕೆ ನಡೆಸಿ ದಡಕ್ಕೆ ಮರಳಿದ ಬೋಟ್‍ನ ದೃಶ್ಯಾವಳಿಯನ್ನು ಚಿತ್ರೀಕರಿಸಿದ ಮೀನುಗಾರರೊಬ್ಬರು ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾರೆ. ನಿತ್ಯ ಹಲವು ಬೋಟ್‍ಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಬೆಳಕಿನ ಮೀನುಗಾರಿಕೆ ನಡೆಸುತ್ತಿವೆ ಎಂದು ದೂರಿದ್ದಾರೆ.

ಜಿಲ್ಲೆಯ ಹತ್ತಾರು ಪರ್ಸಿನ್ ಬೋಟ್‍ಗಳು ನಿರಾತಂಕವಾಗಿ ಆಳಸಮುದ್ರದಲ್ಲಿ ಬೆಳಕಿನ ಮೀನುಗಾರಿಕೆ ನಡೆಸುತ್ತಿವೆ ಎಂದು ಸಾಂಪ್ರದಾಯಿಕ ಮೀನುಗಾರರು ಆರೋಪಿಸುತ್ತಿದ್ದಾರೆ. ಹಿಂದಿನ ಎರಡು ವರ್ಷಗಳಿಂದ ಬೆಳಕಿನ ಮೀನುಗಾರಿಕೆ ನಡೆಸುವ ಬೋಟುಗಳನ್ನು ಪತ್ತೆ ಹಚ್ಚಿ ಹಿಡಿದುಕೊಡುವ ಕೆಲಸವನ್ನು ಮೀನುಗಾರರೇ ಮಾಡಿದ್ದರು.

ADVERTISEMENT

ಆದರೆ, ಈ ಬಾರಿ ಹಲವು ಬೋಟುಗಳ ಮೂಲಕ ನಿಷೇಧಿತ ಪದ್ಧತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೂರು ನೀಡಲು ಹಿಂದೇಟು ಹಾಕುವ ಸ್ಥಿತಿ ಉಂಟಾಗಿದೆ. ಬೈತಕೋಲ, ಹೊನ್ನಾವರ, ಭಟ್ಕಳ ಭಾಗದಲ್ಲಿ ಹಲವು ಪರ್ಸಿನ್ ಬೋಟುಗಳು ಬೆಳಕಿನ ಮೀನುಗಾರಿಕೆಯಲ್ಲಿ ತೊಡಗಿಕೊಂಡಿವೆ ಎಂದು ಮೀನುಗಾರರೊಬ್ಬರು ದೂರಿದರು.

‘ಆಳಸಮುದ್ರದಲ್ಲಿ 250 ಕೆ.ವಿ ಸಾಮರ್ಥ್ಯದ ಜನರೇಟರ್, 12 ಎಲ್ಇಡಿ ಬಲ್ಬ್ ಬಳಸಿ ರಾತ್ರಿ ವೇಳೆ ಪ್ರಖರ ಬೆಳಕು ಬೀರಲಾಗುತ್ತದೆ. ಬೆಳಕಿಗೆ ಗುಂಪುಗೂಡುವ ಮೀನನ್ನು ಸಣ್ಣ ಗಾತ್ರದ ಬಲೆ ಬೀಸಿ ಹಿಡಿಯಲಾಗುತ್ತದೆ. ನಿಷೇಧಿತ ಪದ್ಧತಿಯಲ್ಲಿ ಮೀನುಗಾರಿಕೆ ನಡೆಸುತ್ತಿರುವವರನ್ನು ನಿಯಂತ್ರಿಸಲು ಮೀನುಗಾರಿಕೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಪ್ರಭಾವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪರ್ಸಿನ್ ಬೋಟುಗಳನ್ನು ನಡೆಸುತ್ತಿದ್ದು ಅವರೇ ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸಿದ ಬೋಟ್ ಮಾಲೀಕರೊಬ್ಬರು ಆರೋಪಿಸಿದರು.

‘ಮೀನು ಸಂತತಿಗೆ ಮಾರಕವಾಗುವ ಕಾರಣಕ್ಕೆ ಬೆಳಕಿನ ಮೀನುಗಾರಿಕೆ ನಿಷೇಧಿಸಲಾಗಿದೆ. ಮೀನು ಸಂತತಿ ಕ್ಷೀಣಿಸುವ ಯಾವುದೇ ರೀತಿಯ ಚಟುವಟಿಕೆಯನ್ನು ವಿರೋಧಿಸುತ್ತೇವೆ. ಮೀನಿನ ಕೊರತೆಯಿಂದಾಗಿ ಇಲ್ಲಿನ ಬೈತಕೋಲದ 75ಕ್ಕೂ ಹೆಚ್ಚು ಟ್ರಾಲರ್ ಬೋಟುಗಳು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತ ಸ್ಥಿತಿ ಇದೆ. ಮೀನು ಕೊರತೆ ಉಂಟುಮಾಡುವ ಚಟುವಟಿಕೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ’ ಎಂದು ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ ಹೇಳುತ್ತಾರೆ.

ಬೆಳಕಿನ ಮೀನುಗಾರಿಕೆ ಚಟುವಟಿಕೆ ಬಗ್ಗೆ ನಿಗಾ ಇಡಲು ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಸಾಂಪ್ರದಾಯಿಕ ಮೀನುಗಾರರಿಂದ ಈವರೆಗೆ ಯಾವುದೇ ದೂರು ಬಂದಿಲ್ಲ
ಬಬಿನ್ ಬೋಪಣ್ಣ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ನಿಷೇಧದ ಆದೇಶ ಇದ್ದಾಗ್ಯೂ ಗೋವಾ ಮಲ್ಪೆ ಭಾಗದ ಬೋಟುಗಳಿಂದ ಬೆಳಕಿನ ಮೀನುಗಾರಿಕೆ ನಡೆಯುತ್ತಿದೆ. ಮೀನು ಲಭಿಸದೆ ನಷ್ಟಕ್ಕೆ ತುತ್ತಾದವರಿಂದ ಈ ಚಟುವಟಿಕೆ ನಡೆಯುತ್ತಿರಬಹುದು
ರಾಜು ತಾಂಡೇಲ ಪರ್ಸಿನ್ ಬೋಟ್ ಯೂನಿಯನ್ ಅಧ್ಯಕ್ಷ
ಸಣ್ಣ ಗಾತ್ರದ ಬಲೆಗೆ ಬೀಳುವ ಮರಿಗಳು
‘ಅವೈಜ್ಞಾನಿಕ ಮಾದರಿಯಲ್ಲಿ ಮೀನುಗಾರಿಕೆ ನಡೆಸುತ್ತಿರುವುದು ಕಾರವಾರವೂ ಸೇರಿದಂತೆ ಹಲವೆಡೆ ಹೆಚ್ಚುತ್ತಿದೆ. ಪರ್ಸಿನ್ ಯೂನಿಯನ್‍‍ನಲ್ಲಿದ್ದ ಪ್ರಮುಖರಲ್ಲೇ ಕೆಲವರು ನಿಯಮಬಾಹೀರವಾಗಿ ಸಣ್ಣ ಗಾತ್ರದ ಬಲೆ ಬಳಸಿ ಮೀನು ಹಿಡಿಸುತ್ತಿದ್ದಾರೆ. 18 ಎಂ.ಎಂ 22 ಎಂ.ಎಂ ಗಾತ್ರದ ಬಲೆಗಳ ಬಳಕೆ ಆಳಸಮುದ್ರದ ಮೀನುಗಾರಿಕೆಯಲ್ಲಿ ನಿಷೇಧವಿದೆ. ಆದರೆ ಅವುಗಳನ್ನೇ ಬಳಸಿ ಮೀನುಗಾರಿಕೆ ನಡೆಸುತ್ತಿರುವುದರಿಂದ ಸಣ್ಣ ಗಾತ್ರದ ಮರಿಗಳು ಬಲೆಗೆ ಬಿದ್ದು ಮತ್ಸ್ಯ ಸಂತತಿ ನಶಿಸಲು ಕಾರಣವಾಗುತ್ತಿದೆ’ ಎಂದು ಪರ್ಸಿನ್ ಬೋಟ್ ಮಾಲೀಕ ವಿಕ್ರಮ್ ತಾಂಡೇಲ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.