![<div class="paragraphs"><p>ಗೋಕರ್ಣದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವದ ಅಂಗವಾಗಿ ಆಕರ್ಷಕ ಶೋಭಾಯಾತ್ರೆ ನಡೆಯಿತು]</p></div>](https://media.assettype.com/prajavani/2026-01-22/9lm6szvu/file848agkb3tuo10yzo96kd.jpg?w=900&q=70&auto=format,compress)
ಗೋಕರ್ಣದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವದ ಅಂಗವಾಗಿ ಆಕರ್ಷಕ ಶೋಭಾಯಾತ್ರೆ ನಡೆಯಿತು]
ಗೋಕರ್ಣ: ಭಾರತ ಸಾವಿರಾರು ವರ್ಷಗಳ ಅತ್ಯಂತ ಪ್ರಾಚೀನತೆಯ ಶ್ರೇಷ್ಠವಾದ ಸಂಸ್ಕೃತಿ ಹೊಂದಿದ ದೇಶ. ಮಾನವನು ಸುಖ, ಶಾಂತಿ, ನೆಮ್ಮದಿಯಿಂದ ಬದುಕಲು ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಹೊಂದಿದ ದೇಶ. ಹಿಂದೂ ಸಮಾಜದ ಮೇಲೆ ಆಗುತ್ತಿರುವ ಅಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಹಿಂದೂಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ಧೇಶದಿಂದ ಹಿಂದೂ ಸಮಾಜೋತ್ಸವ ಆಯೋಜಿಸಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹಕ ರಾಘವೇಂದ್ರ ಕಾಗವಾಡ ಹೇಳಿದರು.
ಅವರು ಗೋಕರ್ಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿರಾಟ ಹಿಂದೂ ಸಮಾಜೋತ್ಸವದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿ ಮಾತನಾಡಿದರು.
ಜೀವನಕ್ಕೆ ಬೇಕಾಗುವ ದೃಷ್ಠ, ದಾರಿ ತೋರಿಸುವ ಶ್ರೇಷ್ಠ ಧರ್ಮ ಹಿಂದೂ ಧರ್ಮ. ಹಿಂದೂ, ಹಿಂದೂವಾಗಿ ಒಟ್ಟಿಗೆ ಬರಬೇಕು. ನಾವೆಲ್ಲಾ ಒಂದು ನಾವೆಲ್ಲ ಹಿಂದೂ ಎಂಬ ಭಾವನೆ ಬೆಳೆಯಬೇಕು. ಹಿಂದೂಗಳು ಒಗ್ಗಾಟ್ಟಾಗಿ ನಿಂತರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಇದಕ್ಕೆ ಭವ್ಯ ರಾಮ ಮಂದಿರವೇ ಸಾಕ್ಷಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಸಮಾಜೋತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀಧರ ಗೋವಿಂದ ಭಟ್ವ ವಹಿಸಿದ್ದರು. ವೇದಿಕೆಯ ಮೇಲೆ ಗೋವಿಂದ ಎನ್ ಗೌಡ, ನಾಗರಾಜ ನಾಯಕ ಅಡಿಗೋಣ, ಮಹೇಶ ಎನ್ ನಾಯ್ಕ, ಚಂದ್ರಕಾಂತ ಶೆಟ್ಟಿ ಮುಂತಾದವರು ಇದ್ದರು.
ಕಾರ್ಯಕ್ರಮದಲ್ಲಿ ಕ್ಷೇತ್ರವನ್ನು ಸ್ವಚ್ಛವಾಗಿಡಲು ದಿನನಿತ್ಯ ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಹಾಲಕ್ಕಿ ಸಂಸ್ಕೃತಿಯ ಹಿರಿಮೆ ಗುಮಟೆಪಾಂಗದೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು.
ಗಣೇಶ್ವರ ದೀಕ್ಷಿತ್ ಕಾರ್ಯಕ್ರಮ ನಿರ್ವಹಿಸಿದರು. ಸಂಘಟಕರಾದ ಉದಯ ಮಯ್ಯರ್, ಮಹೇಶ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಪ್ರಕಾಶ ಗೌಡ, ಸಿ.ಟಿ.ನಾಯ್ಕ ತದಡಿ, ಮಂಜುನಾಥ ಜನ್ನು, ಗಣಪತಿ ನಾಯ್ಕ ಮುಂತಾದವರು ಮಂಚೂಣಿಯಲ್ಲಿದ್ದರು.
ಸೋಮವಾರ ರಾತ್ರಿ ಮುಖ್ಯ ಕಡಲತೀರದಲ್ಲಿ ವಿಜಯಕುಮಾರ ಕೊಡಿಯಾಲಬೈಲ್ ನಿರ್ದೇಶನದಲ್ಲಿ ಛತ್ರಪತಿ ಶಿವಾಜಿ ಎಂಬ ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು.
ಶೋಭಾಯಾತ್ರೆ
ವಿರಾಟ್ ಹಿಂದೂ ಸಮಾಜೋತ್ಸವದ ಅಂಗವಾಗಿ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಮೆಲಿನಕೇರಿಯ ಮಾರುತಿಕಟ್ಟೆಯಿಂದ ಪ್ರಾರಂಭವಾದ ಶೋಭಾಯಾತ್ರೆ ಮುಖ್ಯರಸ್ತೆಯಲ್ಲಿ ಸಾಗಿ, ಮಹಾಬಲೇಶ್ವರ ದೇವಸ್ಥಾನದ ಎದುರಿನಿಂದ ಮುಖ್ಯ ಕಡಲತೀರದಲ್ಲಿ ಮುಕ್ತಾಯವಾಯಿತು.
ಭಾರತಾಂಬೆಯ ಸ್ತಬ್ದಚಿತ್ರ, ಹವ್ಯಾಸಿ ಕಲಾವಿದರಿಂದ ಹಗರಣ, ಹುಲಿವೇಷದ ಕುಣಿತ, ಚಂಡೆ ವಾದನ ಸೇರಿದಂತೆ ವಿವಿಧ ವಾದ್ಯವೃಂದ, ಪೌರಾಣಿಕ ಶರಸೇತುಭಂದ ಮುಂತಾದರೂಪಕಗಳು ಎಲ್ಲರ ಮನೆ ಸೆಳೆಯಿತು.
ಶೋಭಾಯಾತ್ರೆಯ ಉದ್ದಕ್ಕೂ ಮಹಿಳೆಯರಿಂದ ಗಾಯನ, ನೃತ್ಯ, ಭಗವದ್ಗೀತೆ ಪಠಣ, ಭಜನೆಗಳು ಶೋಭಾಯಾತ್ರೆಗೆ ಹೆಚ್ಚು ಮೆರಗು ತಂದುಕೊಟ್ಟಿತು. ಶಿವಾಜಿ ಪಾತ್ರದಾರಿ ಕುದುರೆಯ ಮೇಲೆ ಕುಳಿತು ಶೋಭಾಯಾತ್ರೆಯ ಉದ್ದಕ್ಕೂ ಸಾಗಿದ್ದು ಎಲ್ಲರ ಗಮನ ಸೆಳೆಯಿತು. ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಜನ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು, ಕೇಸರಿ ಧ್ವಜದಾರಿಗಳಾಗಿ ಕುಣಿದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.