ADVERTISEMENT

ಹೊರಗುತ್ತಿಗೆ ಸಿಬ್ಬಂದಿಗೆ ಮರೀಚಿಕೆಯಾದ ಸಂಬಳ

ತಾಲ್ಲೂಕು ಪಂಚಾಯ್ತಿಯಲ್ಲಿ ಪದೇ ಪದೇ ಎದುರಾಗುತ್ತಿರುವ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 15:38 IST
Last Updated 12 ಸೆಪ್ಟೆಂಬರ್ 2022, 15:38 IST

ಶಿರಸಿ: ಇಲ್ಲಿನ ತಾಲ್ಲೂಕು ಪಂಚಾಯ್ತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 6 ಜನ ಸಿಬ್ಬಂದಿಗೆ ಕಳೆದ ಆರು ತಿಂಗಳಿನಿಂದ ವೇತನ ಸಿಕ್ಕಿಲ್ಲ. ಪದೇ ಪದೇ ತಾಂತ್ರಿಕ ಕಾರಣದ ನೆಪವೊಡ್ಡಿ ವೇತನ ಪಾವತಿಗೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ತಲಾ ಒಬ್ಬ ಕಂಪ್ಯೂಟರ್ ಆಪರೇಟರ್, ಚಾಲಕ, ಮೂವರು ಡಿ–ಗ್ರೂಪ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ವೇತನ ಇಲ್ಲದೆ ಪರದಾಡುತ್ತಿದ್ದಾರೆ. ತಾಲ್ಲೂಕು ಪಂಚಾಯ್ತಿಯಲ್ಲಿ ಕಾಯಂ ಸಿಬ್ಬಂದಿ ಸಂಖ್ಯೆ ಕಡಿಮೆ ಇದ್ದು ಈ ಸಿಬ್ಬಂದಿ ಮೇಲೆ ಕೆಲಸದ ಒತ್ತಡವೂ ಹೆಚ್ಚಿದೆ.

ವೇತನ ನಂಬಿ ಜೀವನ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ಈಗ ಮನೆ ಬಾಡಿಗೆ ಪಾವತಿ, ಇನ್ನಿತರ ದೈನಂದಿನ ಖರ್ಚಿಗೆ ಹಣವಿಲ್ಲದೆ ತೊಂದರೆಗೊಳಗಾಗಿದ್ದಾರೆ. ವೇತನ ಪಾವತಿಗೆ ನಿರ್ದೇಶನ ನೀಡುವಂತೆ ಈಚೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಮನವಿ ಸಲ್ಲಿಸಿದ್ದಾರೆ.

ADVERTISEMENT

‘ಕಳೆದ ಫೆಬ್ರವರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಜುಲೈನಲ್ಲಿ ಜಿಲ್ಲಾ ಪಂಚಾಯ್ತಿಯಿಂದ ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ, ಮರು ಟೆಂಡರ್ ನಡೆಸಬೇಕು ಎಂಬ ಸೂಚನೆ ಬಂದಿತ್ತು. ಮರು ಟೆಂಡರ್ ನಡೆಸದೆ ಹಿಂದಿನ ಟೆಂಡರ್ ಪ್ರಕ್ರಿಯೆಯ ದಾಖಲೆಯನ್ನೇ ತಾಲ್ಲೂಕು ಪಂಚಾಯ್ತಿಯಿಂದ ಜಿಲ್ಲಾ ಪಂಚಾಯ್ತಿಗೆ ಕಳುಹಿಸಲಾಗಿದೆ. ಈ ಪ್ರಕ್ರಿಯೆಗಳಿಂದ ವೇತನ ಬಿಡುಗಡೆಗೆ ವಿಳಂಬ ಉಂಟಾಗಿದೆ’ ಎಂದು ಸಿಬ್ಬಂದಿ ದೂರಿದರು.

‘ಟೆಂಡರ್ ಪ್ರಕ್ರಿಯೆ ಗೊಂದಲ ಈ ಹಿಂದೆಯೂ ಹಲವು ಬಾರಿ ಉಂಟಾಗಿದೆ. ಇದರಿಂದ ವೇತನ ವಿಳಂಬವಾಗುವ ಜತೆಗೆ ಹಳೆಯ ಮೂಲ ವೇತನ ಪಡೆದುಕೊಳ್ಳಬೇಕಾಗುತ್ತದೆ. ಇದರಿಂದ ಕಾರ್ಮಿಕ ಕಾಯ್ದೆ ಪ್ರಕಾರ ಪರಿಷ್ಕೃತ ವೇತನದಿಂದಲೂ ವಂಚಿತರಾಗುವಂತಾಗಿದೆ’ ಎಂದು ಸಮಸ್ಯೆ ಹೇಳಿದರು.

ಹೊರಗುತ್ತಿಗೆ ಸಿಬ್ಬಂದಿ ನೇಮಕದ ಟೆಂಡರ್ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ವೇತನ ವಿಳಂಬವಾಗಿದೆ. ಜಿಲ್ಲಾ ಪಂಚಾಯ್ತಿಗೆ ಪತ್ರ ಬರೆಯಲಾಗಿದ್ದು ಸಮಸ್ಯೆ ಶೀಘ್ರ ಬಗೆಹರಿಯಬಹುದು.

ದೇವರಾಜ ಹಿತ್ತಲಕೊಪ್ಪ

ತಾಲ್ಲೂಕು ಪಂಚಾಯ್ತಿ ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.