ADVERTISEMENT

ಕಾರವಾರ: ಹೆದ್ದಾರಿ ಮೇಲೆ ಮೂರಡಿ ನೀರು!

ಕಾರವಾರ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಘಟಕದ ಕೋಣೆಯೂ ಜಲಾವೃತ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 12:07 IST
Last Updated 15 ಆಗಸ್ಟ್ 2019, 12:07 IST
ಕಾರವಾರದ ಸಂಕ್ರಿವಾಡದಲ್ಲಿ ರಸ್ತೆಯಲ್ಲಿ ತುಂಬಿದ್ದ ಮಳೆ ನೀರಿನಲ್ಲೇ ವಾಹನ ಸವಾರರು ಸಾಗಿದರು
ಕಾರವಾರದ ಸಂಕ್ರಿವಾಡದಲ್ಲಿ ರಸ್ತೆಯಲ್ಲಿ ತುಂಬಿದ್ದ ಮಳೆ ನೀರಿನಲ್ಲೇ ವಾಹನ ಸವಾರರು ಸಾಗಿದರು   

ಕಾರವಾರ:ನಗರದಲ್ಲಿಗುರುವಾರಬೆಳಗಿನ ಜಾವ ಸುರಿದ ಭಾರಿ ಮಳೆಯಿಂದ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.

ಸಮೀಪದ ಬಿಣಗಾದಲ್ಲಿ ಹಳ್ಳದ ನೀರು ಉಕ್ಕಿದ ಪರಿಣಾಮರಾಷ್ಟ್ರೀಯ ಹೆದ್ದಾರಿ 66ರ ಮೇಲೆಮೂರು ನಾಲ್ಕುಅಡಿಗಳಷ್ಟು ನೀರು ನಿಂತಿತ್ತು. ರಸ್ತೆಯ ಅಂಚು ಮತ್ತು ಹೊಂಡ ಒಂದೇ ರೀತಿ ಕಂಡು ವಾಹನಚಾಲಕರುಗೊಂದಲಕ್ಕೊಳಗಾದರು. ಹೆದ್ದಾರಿಯ ಅಂಚಿನಲ್ಲಿರುವ ಅಂಗಡಿಗಳೂ ಜಲಾವೃತವಾದವು.

ಮಳೆ–ಪ್ರವಾಹದ ಸುದ್ದಿಗೆwww.prajavani.net/tags/karnataka-floodsಲಿಂಕ್ ಕ್ಲಿಕ್ ಮಾಡಿ

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಆಯುಕ್ತ ಯೋಗೇಶ್ವರ್ತಮ್ಮ ಕಚೇರಿಯಇತರ ಅಧಿಕಾರಿಗಳ ಜೊತೆಪರಿಶೀಲನೆ ನಡೆಸಿದರು.ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಬಿಣಗಾದಿಂದ ಸೀತಾನಗರಕ್ಕೆ ತೆರಳುವ ರಸ್ತೆಯ ಬಳಿ ಅಂಡರ್‌ಪಾಸ್‌ ನಿರ್ಮಾಣದ ಸಲುವಾಗಿಮಣ್ಣು ಸುರಿಯಲಾಗಿತ್ತು. ಐಆರ್‌ಬಿ ಸಂಸ್ಥೆಯ ಭಾರಿ ವಾಹನಗಳನ್ನು ನಿಲ್ಲಿಸಲು ನೆಲಕ್ಕೆ ಕಾಂಕ್ರೀಟ್ ಕೂಡ ಹಾಕಲಾಗಿತ್ತು.ಅವುಗಳನ್ನು ತೆರವು ಮಾಡಿಸಿದ ಬಳಿಕ ನೀರು ಇಳಿದಿದೆ’ ಎಂದು ತಿಳಿಸಿದರು.

ಕಾರವಾರತಾಲ್ಲೂಕಿನ ಬಿಣಗಾದಲ್ಲಿ ಗುರುವಾರ ಜಲಾವೃತವಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನಗಳು ಸಂಚರಿಸುತ್ತಿರುವುದು

ಡಯಾಲಿಸಿಸ್ ಘಟಕಕ್ಕೆ ನೀರು:ಜಿಲ್ಲಾ ಆಸ್ಪತ್ರೆಯ ಸುತ್ತಮುತ್ತ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ಆಸ್ಪತ್ರೆಯ ಬ್ಲಾಕ್‌ಗಳ ನಡುವೆನೀರು ತುಂಬಿಡಯಾಲಿಸಿಸ್ ಘಟಕದ ಕೋಣೆಯೂ ಜಲಾವೃತವಾಯಿತು. ಯಂತ್ರೋಪಕರಣಗಳನ್ನು ಸುರಕ್ಷಿತವಾಗಿ ಕೋಣೆಯೊಂದಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ನೀರನ್ನು ತೆರವು ಮಾಡಿದರು.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಕುಡ್ತರಕರ್, ‘ಬುಧವಾರ ರಾತ್ರಿಯಿಡೀ ಭಾರಿ ಮಳೆಯಾಯಿತು. ಸುತ್ತಮುತ್ತ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದ ಕಾರಣ ಸಮಸ್ಯೆಯಾಯಿತು. ಉಳಿದಂತೆ ಯಾವುದೇ ಸಮಸ್ಯೆಯಾಗಿಲ್ಲ’ ಎಂದರು.

ತಾಲ್ಲೂಕಿನ ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ಗುಡ್ಡದ ಮಣ್ಣು ಬಿದ್ದಿತ್ತು. ಇದರಿಂದ ವಾಹನ ಸಂಚಾರದಲ್ಲಿ ಸ್ವಲ್ಪಕಾಲ ವ್ಯತ್ಯಯವಾಯಿತು.

ಕೆಎಚ್‌ಬಿಗೆ ಜಲ ದಿಗ್ಬಂಧನ!:ಕಾರವಾರದ ನ್ಯೂ ಕೆಎಚ್‌ಬಿ ಕಾಲೊನಿಯರಸ್ತೆಗಳಲ್ಲಿ ಸುಮಾರು ಎರಡು ಅಡಿಗಳಷ್ಟು ಮಳೆ ನೀರು ನಿಂತಿತ್ತು. ಇದರಿಂದ ಇಡೀ ಬಡಾವಣೆಯೇ ಕೆರೆಯಂತೆ ಕಂಡುಬಂತು.

‘ಒಂದು ಸಲ ಜೋರಾಗಿ ಮಳೆ ಬಂದರೆ ಸಾಕು, ಇಲ್ಲಿನ ರಸ್ತೆಗಳಲ್ಲಿ ಮೂರು ಅಡಿ ನೀರು ಸಂಗ್ರಹವಾಗುತ್ತದೆ. ಸುತ್ತಮುತ್ತ ರಸ್ತೆಗಳಿಗೆ ಕಾಂಕ್ರೀಟ್ ಮಾಡಿ ಎತ್ತರಿಸಲಾಗಿದೆ. ಹಾಗಾಗಿ ಮಳೆ ನೀರು ಎಲ್ಲ ಕಡೆ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ.ವಾಟರ್ ಟ್ಯಾಂಕ್‌ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ನಡುವಿನ ಪ್ರದೇಶದಲ್ಲಿ ನಿಲ್ಲುತ್ತಿದೆ. ಇದರಿಂದ ಸಮಸ್ಯೆ ಹೇಳತೀರದಾಗಿದೆ’ ಎಂದು ಸ್ಥಳೀಯ ನಿವಾಸಿಗಳಾದ ರಾಜೇಶ ನಾಯ್ಕ ಮತ್ತು ಎಂ.ಆರ್.ಭಟ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಡಾಂಬರು, ಕಾಂಕ್ರೀಟ್ ಕಾಣದ ರಸ್ತೆಗಳಲ್ಲಿ ಹೋಗಲು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಪೋಷಕರು ಗೊಣಗುತ್ತ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.