ADVERTISEMENT

ಕೃಷಿ ಜಮೀನಿಗೆ ಕಾಡುಕೋಣಗಳ ಲಗ್ಗೆ

ರೈತರ ವರ್ಷದ ಶ್ರಮಕ್ಕೆ ವನ್ಯಜೀವಿಗಳ ಸವಾಲು

ರಾಜೇಂದ್ರ ಹೆಗಡೆ
Published 4 ಅಕ್ಟೋಬರ್ 2025, 6:48 IST
Last Updated 4 ಅಕ್ಟೋಬರ್ 2025, 6:48 IST
ಶಿರಸಿ ತಾಲ್ಲೂಕಿನ ತೆರಕನಹಳ್ಳಿ ಭಾಗದ ತೋಟದಲ್ಲಿ ಕಾಡುಕೋಣಗಳು ಅಡಿಕೆ ಗಿಡ ನಾಶ ಮಾಡಿವೆ
ಶಿರಸಿ ತಾಲ್ಲೂಕಿನ ತೆರಕನಹಳ್ಳಿ ಭಾಗದ ತೋಟದಲ್ಲಿ ಕಾಡುಕೋಣಗಳು ಅಡಿಕೆ ಗಿಡ ನಾಶ ಮಾಡಿವೆ   

ಶಿರಸಿ: ಶಿರಸಿ, ಸಿದ್ದಾಪುರ ತಾಲ್ಲೂಕುಗಳ ದಟ್ಟಾರಣ್ಯದ ಅಂಚಿನ ಹಳ್ಳಿಗಳಲ್ಲಿ ಕೆಲವು ದಿನಗಳಿಂದ ಕಾಡುಕೋಣಗಳ ಹಾವಳಿ ಹೆಚ್ಚಾಗಿದೆ. ಇವು ಹಿಂಡು ಹಿಂಡಾಗಿ ಭತ್ತದ ಗದ್ದೆಯ ಜತೆ ಅಡಿಕೆ ತೋಟಗಳಿಗೆ ಲಗ್ಗೆ ಇಡುತ್ತಿರುವುದು ಅರಣ್ಯದಂಚಿನ ಗ್ರಾಮಗಳ ಕೃಷಿಕರ ನಿದ್ದೆಗೆಡಿಸಿದೆ. 

ಶಿರಸಿ, ಸಿದ್ದಾಪುರ ಗ್ರಾಮೀಣ ಭಾಗದಲ್ಲಿ ಅಡಿಕೆ, ಬಾಳೆ, ಕರಿಮೆಣಸು ಇತ್ಯಾದಿ ಬೆಳೆ ಬೆಳೆಯಲಾಗುತ್ತಿದೆ. ಕೆಲವು ಕಡೆಗಳಲ್ಲಿ ಇಂದಿಗೂ ಕೆಲವರು ಭತ್ತದ ಬೇಸಾಯ ಮಾಡುತ್ತಿದ್ದಾರೆ. ತಾಲ್ಲೂಕಿನ ಕುಳವೆ ಗ್ರಾಮ ಪಂಚಾಯಿತಿ ತೆರಕನಹಳ್ಳಿ, ಮೆಣಸಿಕೇರಿ, ಉಂಚಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆರೆಕೊಪ್ಪ, ಕಾನಸೂರು ಪಂಚಾಯಿತಿ ಭಾಗದ ಹಿರೇಕೈ, ಕೊಂಬೆಮನೆ ಸೇರಿ ಕಾಡಂಚಿನ ಹಳ್ಳಿಗಳಿಗೆ ಕಾಡುಕೋಣಗಳ ಹಾವಳಿ ಮಿತಿ ಮೀರಿದ್ದು, ಇವುಗಳ ಹಾವಳಿಯಿಂದ ಕೃಷಿ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ’ ಎಂಬುದು ಸ್ಥಳೀಯ ರೈತರ ದೂರಾಗಿದೆ. 

‘ಪದೇಪದೇ ಕಾಡುಕೋಣಗಳು ಲಗ್ಗೆ ಇಟ್ಟು ಅಡಿಕೆ, ಬಾಳೆ ಗಿಡಗಳು, ಭತ್ತದ ಪೈರನ್ನು ನಾಶ ಮಾಡುತ್ತಿವೆ. ಈ ಹಿಂದೆ ಪಟಾಕಿ ಸಿಡಿಸಿದರೆ ಓಡುತ್ತಿದ್ದ ಕಾಡುಕೋಣಗಳು ಈಗೀಗ ಬೆದರುತ್ತಿಲ್ಲ. ವರ್ಷದ ಶ್ರಮ ಒಂದೆರಡು ದಿನಗಳಲ್ಲಿ ಕಣ್ಣೆದುರೇ ಪ್ರಯೋಜನಕ್ಕೆ ಬರದಂತಾಗುತ್ತಿದೆ. ಕಾಡುಪ್ರಾಣಿಗಳ ಉಪಟಳದಿಂದಾಗಿ ಕೃಷಿಯನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಸರ್ಕಾರದ ನೀತಿಯಿಂದಾಗಿ ಕೋವಿ ಇದ್ದರೂ ಪ್ರಾಣಿಗಳನ್ನು ಕೊಲ್ಲುವ ಅವಕಾಶ ಇಲ. ಸರ್ಕಾರ ಕಾಡುಪ್ರಾಣಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರೈತರು ಕೃಷಿ ಕಾರ್ಯದಲ್ಲಿ ತೊಡಗುವುದು ಕಷ್ಟ ಸಾಧ್ಯವಾಗಲಿದೆ‘ ಎಂಬುದು ಸಂತ್ರಸ್ತ ರೈತರ ಅಳಲು. 

ADVERTISEMENT

‘ಈ ಹಿಂದೆ ರಾತ್ರಿ ಸಂದರ್ಭದಲ್ಲಿ ಮಾತ್ರ ಭತ್ತದ ಗದ್ದೆ, ಅಡಿಕೆ ತೋಟಗಳಿಗೆ ನುಗ್ಗುತ್ತಿದ್ದ ಕಾಡುಕೋಣಗಳು ಈಗೀಗ ಹಗಲಲ್ಲೂ ಕೃಷಿ ಪ್ರದೇಶಕ್ಕೆ ಬರುತ್ತಿವೆ. ಸಾಕಷ್ಟು ಗಟ್ಟಿಮುಟ್ಟಾದ ಬೇಲಿ ನಿರ್ಮಿಸಿದರೂ ಪ್ರಯೋಜನವಾಗುತ್ತಿಲ್ಲ. ಪ್ರಸ್ತುತ ಭತ್ತದ ಗದ್ದೆಗಳು ಸೊಂಪಾಗಿ ಬೆಳೆದಿದ್ದು, ರಾತ್ರಿ ಕಳೆದು ಬೆಳಗು ಹರಿಯುವುದರೊಳಗೆ ತಿಂದು ನಾಶ ಮಾಡುತ್ತಿವೆ. ಜತೆಗೆ, ವಾಹನ ಸಂಚರಿಸುವ, ಪಾದಚಾರಿಗಳು ಸಾಗುವ ಮಾರ್ಗಗಳಲ್ಲೂ ಕಾಣಿಸಿಕೊಳ್ಳುತ್ತಿವೆ. ಇವುಗಳಿಂದ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎನ್ನುತ್ತಾರೆ  ತೆರಕನಹಳ್ಳಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಿರೀಶ ಭಟ್.

ಕಾಡುಕೋಣಗಳು ಉಪಟಳ ಹೆಚ್ಚಿರುವ ಕಡೆ ಹಗಲಲ್ಲೂ ಕೂಬಿಂಗ್ ಮಾಡಲಾಗುತ್ತಿದೆ. ಬೆಳೆ ಹಾನಿಯಾದರೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶವಿದೆ.
ಗಿರೀಶ ಆರ್.ಎಫ್.ಒ. ಶಿರಸಿ 

‘ನಿಯಮಾವಳಿ ಬದಲಿಸಿ‘ 

‘ಕಾಡಾನೆ ಕಡವೆ ಜಿಂಕೆ ಕಾಡುಕೋಣ ಮಂಗಗಳು ಕೆಂಜಣಿಲು ಹಂದಿ ಸೇರಿದಂತೆ ವಿವಿಧ ಕಾಡುಪ್ರಾಣಿಗಳಿಂದ ರೈತರು ಸಾಕಷ್ಟು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಪರಿಹಾರ ರೂಪದಲ್ಲಿ ಅರಣ್ಯ ಇಲಾಖೆಯಿಂದ ಬಿಡಿಗಾಸು ನೀಡಲಾಗುತ್ತಿದೆ. ಅದರಲ್ಲೂ ಮಂಗಗಳ ಹಾವಳಿಯಿಂದಾಗುವ ನಷ್ಟಕ್ಕೆ ಕಿಂಚಿತ್ತೂ ಪರಿಹಾರವಿಲ್ಲ. ಹೀಗಾಗಿ ಬೆಳೆ ನಷ್ಟಕ್ಕೆ ವೈಜ್ಞಾನಿಕ ಲೆಕ್ಕಾಚಾರದಲ್ಲಿ ಸೂಕ್ತ ಪರಿಹಾರ ಧನ ನೀಡುವ ಅಗತ್ಯವಿದೆ. ಇದಕ್ಕೆ ಅರಣ್ಯ ಇಲಾಖೆ ಪರಿಹಾರ ನಿಯಮಾವಳಿ ಬದಲಿಸುವ ಅನಿವಾರ್ಯತೆಯಿದೆ’ ಎಂಬುದು ನೊಂದ ಕೃಷಿಕರ ಮಾತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.