ADVERTISEMENT

ಗೆದ್ದು ಬಂದವರು | ಔಷಧವಿಲ್ಲದೇ ಗುಣವಾಗುವ ಕಾಯಿಲೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 14:03 IST
Last Updated 29 ಜುಲೈ 2020, 14:03 IST
   

ಶಿರಸಿ: ‘ನನಗೆ ಕೋವಿಡ್ 19 ಕಾಯಿಲೆಯ ಯಾವ ಲಕ್ಷಣಗಳೂ ಇರಲಿಲ್ಲ. ಸಹಜವಾಗಿಯೇ ಇದ್ದೆ. ಮನೆಯಲ್ಲಿರುವ ಬದಲು ಕೋವಿಡ್ ಕೇರ್ ಸೆಂಟರ್‌ನಲ್ಲಿ ಉಳಿದೆ. ಯಾವ ಔಷಧದ ಅಗತ್ಯವೂ ಇಲ್ಲದೆ ಒಂದು ವಾರದಲ್ಲಿ ನೆಗೆಟಿವ್ ವರದಿ ಬಂತು’ ಎಂದು ಪ್ಯಾರಾ ಮೆಡಿಕಲ್ ಸಿಬ್ಬಂದಿ ಗುರುದತ್ ಹೇಳಿದರು.

ಕೋವಿಡ್ 19ನಿಂದ ಗುಣಮುಖರಾಗಿ ಮನೆಗೆ ಬಂದಿರುವ ಅವರು ತಮ್ಮ ಅನುಭವವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಕರ್ತವ್ಯದಲ್ಲಿರುವ ಸಾಕಷ್ಟು ಮುನ್ನೆಚ್ಚರಿಕೆವಹಿಸಿ, ಎಲ್ಲ ರೀತಿಯ ಸುರಕ್ಷಾ ಸಾಮಗ್ರಿ ಧರಿಸಿಯೇ ಕೆಲಸ ಮಾಡುತ್ತಿದ್ದೆವು. ನಮ್ಮಲ್ಲೇ ಕೆಲವು ಸಿಬ್ಬಂದಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಆಗ, ನಿಯಮದಂತೆ ನಾವು ಕೂಡ ಪರೀಕ್ಷೆ ಮಾಡಿಸಿಕೊಂಡೆವು. ರೋಗದ ಯಾವ ಲಕ್ಷಣವೂ ಇಲ್ಲದ ಕಾರಣ, ನನ್ನ ವರದಿ ನೆಗೆಟಿವ್ ಬರಬಹುದೆಂದು ನಿರೀಕ್ಷಿಸಿದ್ದೆ. ಆದರೆ, ನಮ್ಮಲ್ಲಿ ಇಬ್ಬರಿಗೆ ಪಾಸಿಟಿವ್ ಬಂತು. ಕ್ವಾರಂಟೈನ್ ಆಗುವುದೇ ಉತ್ತಮವೆಂದು ಕೋವಿಡ್ ಕೇರ್ ಸೆಂಟರ್ ಸೇರಿದೆ. ಅಲ್ಲಿ ಒಳ್ಳೆಯ ಆಹಾರ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ದಿನವೂ ಕೊಡುತ್ತಿದ್ದರು’.

ADVERTISEMENT

‘ಸಾರ್ಸ್‌ ವೈರಸ್‌ನಲ್ಲಿ ಏಳು ಪ್ರಕಾರಗಳಿವೆಯಂತೆ. ಈವರೆಗಿನ ಅಧ್ಯಯನದಂತೆ ಅವುಗಳಲ್ಲಿ ಎರಡು ಮಾತ್ರ ಅಪಾಯಕಾರಿ. ಪ್ರಸ್ತುತ ಏಳೂ ಮಾದರಿಯ ವೈರಸ್‌ ತಗುಲಿರುವವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಅಪಾಯಕಾರಿ ಯಾವುದು ಎಂಬುದನ್ನು ಗುರುತಿಸಿ, ಅಗತ್ಯವಿದ್ದವರಿಗೆ ಮಾತ್ರ ಚಿಕಿತ್ಸೆ ನೀಡಿದರೆ, ಜನರಲ್ಲಿ ಉಂಟಾಗುವ ಭಯ ತಪ್ಪುತ್ತದೆ. ಕೋವಿಡ್ ಪರೀಕ್ಷೆ ಮತ್ತು ರೋಗ ನಿರ್ಧರಿಸುವ ಬಗೆಯ ಬಗ್ಗೆ ಇನ್ನಷ್ಟು ಸ್ಪಷ್ಟತೆ ಬಂದರೆ ಒಳ್ಳೆಯದು’.

‘ಪಾಸಿಟಿವ್ ಬಂದವರಿಗೆ ಕಾಲ್ ಮಾಡಿದಾಗ ಅಗತ್ಯ ವಿಷಯಗಳ ಮಾಹಿತಿಯನ್ನು ಕಡ್ಡಾಯವಾಗಿ ನೀಡುವಂತಾಗಬೇಕು. ಉದಾಹರಣೆಗೆ– ಪಿಪಿಿ ಕಿಟ್ ಹೇಗೆ ಧರಿಸಬೇಕು, ಕೇರ್ ಸೆಂಟರ್ ತಲುಪಿದ ಮೇಲೆ ಅದನ್ನು ಎಲ್ಲಿ ಇಡಬೇಕು ಇವುಗಳ ಬಗ್ಗೆ ತಿಳಿಸಬೇಕು ಅಥವಾ ಕೇರ್ ಸೆಂಟರ್‌ನಲ್ಲಿ ಮಾಹಿತಿ ಪೋಸ್ಟರ್ ಹಾಕಬೇಕು. ಇದರಿಂದ ರೋಗಿಗಳಿಗೆ ಸಹಾಯವಾಗುತ್ತದೆ’.

‘ಜತೆಗೆ ಪಾಸಿಟಿವ್ ಬಂದವರಿಗೆ ಕರೆ ಮಾಡಿದಾಗ, ಈ ರೋಗದ ಬಗ್ಗೆ ತಿಳಿಹೇಳಬೇಕು. ಕಾಯಿಲೆಯ ಲಕ್ಷಣಗಳಿದ್ದರೂ ಇದು ಗುಣಮುಖವಾಗುತ್ತದೆ ಎಂಬುದನ್ನು ತಿಳಿಸಬೇಕು. ಇದರಿಂದ ಜನರು ವಿನಾಕಾರಣ ಗಾಬರಿಯಾಗುವುದು, ಕೇರ್ ಸೆಂಟರ್‌ಗೆ ಹೋಗಲು ಅಂಜಿಕೆ ಮಾಡಿಕೊಳ್ಳುವುದು ತಪ್ಪುತ್ತದೆ’

ನಿರೂಪಣೆ: ಸಂಧ್ಯಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.