ADVERTISEMENT

ಯಕ್ಷಗಾನ ಕಲಾವಿದ ಕರ್ಕಿ ನಾರಾಯಣ ಹಾಸ್ಯಗಾರ ಇನ್ನಿಲ್ಲ

ಬಿ.ಬಿ.ಸಿ ವಾಹಿನಿಯಲ್ಲಿ ಕಾರ್ಯಕ್ರಮ ನೀಡಿದ ಹಿರಿಮೆಯ ಕಲಾವಿದ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 14:38 IST
Last Updated 22 ಜೂನ್ 2020, 14:38 IST
ಕರ್ಕಿ ನಾರಾಯಣ ಹಾಸ್ಯಗಾರ
ಕರ್ಕಿ ನಾರಾಯಣ ಹಾಸ್ಯಗಾರ   

ಕಾರವಾರ: ಹಿರಿಯ ಯಕ್ಷಗಾನ ಕಲಾವಿದ ಕರ್ಕಿ ನಾರಾಯಣ ಹಾಸ್ಯಗಾರ (90), ಹೊನ್ನಾವರ ತಾಲ್ಲೂಕಿನ ಕರ್ಕಿಯ ತಮ್ಮ ನಿವಾಸದಲ್ಲಿ ಸೋಮವಾರ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಆರು ದಶಕಗಳ ಕಾಲ ಯಕ್ಷಗಾನದಲ್ಲಿ ಕಲಾವಿದರಾಗಿದ್ದ ಅವರು, ಶೃಂಗಾರ ಮತ್ತು ಲಾಲಿತ್ಯದ ಪಾತ್ರಗಳ ಮನೋಜ್ಞ ನಟನೆಯಿಂದ ಪ್ರಸಿದ್ಧರಾಗಿದ್ದರು. ಉತ್ತರ ಕನ್ನಡ ಮತ್ತು ಅವಿಭಜಿತ ದಕ್ಷಿಣ ಕನ್ನಡದ ಯಕ್ಷಗಾನ ಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಬ್ರುವಾಹನ, ಅಭಿಮನ್ಯು, ಅರ್ಜುನ, ಸುಧನ್ವ, ಕೀಚಕ, ಶಿವ, ರಾಮ, ಲಕ್ಷ್ಮಣ, ವಾಲಿ ಮುಂತಾದ ಪಾತ್ರಗಳು, ಅಪರೂಪಕ್ಕೆ ಸ್ತ್ರೀ ವೇಷವನ್ನೂ ಸಮರ್ಥವಾಗಿ ನಿಭಾಯಿಸಿದ್ದರು.

ಕರ್ಕಿ ಹಾಸ್ಯಗಾರ ಮೇಳದೊಂದಿಗೆವಿವಿಧ ಜಿಲ್ಲೆಗಳು, ಹೊರರಾಜ್ಯಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ್ದರು. ಈ ಮೇಳವು 1974ರಲ್ಲಿ ಬಿ.ಬಿ.ಸಿ ವಾಹಿನಿಯಲ್ಲಿಯಕ್ಷಗಾನ ಪ್ರದರ್ಶನ ನೀಡಿದ ಮೊದಲ ಮೇಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅವರ ಕಲಾಸೇವೆಯನ್ನು ಪರಿಗಣಿಸಿ ಜಾನಪದ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಯೂ ಪ್ರದಾನವಾಗಿದೆ.

ADVERTISEMENT

ಮೃತರ ಅಂತ್ಯಕ್ರಿಯೆ ಕರ್ಕಿಯಲ್ಲಿ ಮಂಗಳವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.