ADVERTISEMENT

ಕಲಾವಿದರನ್ನು ಸೃಷ್ಟಿಸುವ ‘ಯಕ್ಷಗೆಜ್ಜೆ’

ಮಕ್ಕಳು, ಮಹಿಳೆಯರಿಗೆ ಯಕ್ಷಗಾನ, ತಾಳಮದ್ದಲೆ, ಭಾಗವತಿಕೆ ತರಬೇತಿ

ಗಣಪತಿ ಹೆಗಡೆ
Published 26 ಮಾರ್ಚ್ 2022, 19:31 IST
Last Updated 26 ಮಾರ್ಚ್ 2022, 19:31 IST
ನಿರ್ಮಲಾ ಹೆಗಡೆ ಗೋಳಿಕೊಪ್ಪ
ನಿರ್ಮಲಾ ಹೆಗಡೆ ಗೋಳಿಕೊಪ್ಪ   

ಶಿರಸಿ: ಯಕ್ಷಗಾನ ಕೇವಲ ಪುರುಷ ಕಲಾವಿದರಿಗೆ ಸೀಮಿತ ಎಂಬ ತಪ್ಪು ಗ್ರಹಿಕೆಯನ್ನು ಕೆಲವು ವರ್ಷದ ಹಿಂದೆ ಮಹಿಳಾ ಕಲಾವಿದರು ತೊಡೆದು ಹಾಕಿದರು. ಈಗ ಯಕ್ಷ ತರಬೇತಿಯಲ್ಲೂ ಮಹಿಳೆಯರು ಹಿಂದೆ ಬಿದ್ದಿಲ್ಲ ಎಂಬುದನ್ನು ಕಲಾವಿದೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಸಾಬೀತುಪಡಿಸಲು ಹೊರಟಿದ್ದಾರೆ.

ಯಕ್ಷಗಾನ ಅಕಾಡೆಮಿಯ ಸದಸ್ಯರೂ ಆಗಿರುವ ನಿರ್ಮಲಾ ಸಮಾನ ಮನಸ್ಕರನ್ನು ಸೇರಿಸಿ ಕಟ್ಟಿದ ‘ಯಕ್ಷಗೆಜ್ಜೆ’ ಸಂಸ್ಥೆ ಮಹಿಳೆಯರು, ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವಲ್ಲಿ ಮುಂಚೂಣಿಯಲ್ಲಿದೆ. ಮೂರು ವರ್ಷಗಳಲ್ಲಿ 60ಕ್ಕೂ ಹೆಚ್ಚು ಕಲಾವಿದರನ್ನು ಸೃಷ್ಟಿಸಿದ್ದು ಈ ಸಂಸ್ಥೆಯ ಸಾಧನೆ.

ಈಚೆಗೆ ತಾಳಮದ್ದಲೆ, ಭಾಗವತಿಕೆಯನ್ನೂ ಕಲಿಸಲು ಸಂಸ್ಥೆ ಮುಂದಾಗಿದೆ. ಏಳು ಮಂದಿ ಅಭ್ಯರ್ಥಿಗಳು ತಾಳಮದ್ದಲೆ ಕಲಿಯುತ್ತಿದ್ದಾರೆ. ವಿಶೇಷವೆಂದರೆ ಇವರೆಲ್ಲರೂ ಹೆಣ್ಣು ಮಕ್ಕಳು. ಕೆಲವರು ಭಾಗವತಿಕೆಯನ್ನೂ ಕಲಿಯಲು ಆಸಕ್ತಿ ತೋರುತ್ತಿದ್ದಾರೆ.

ADVERTISEMENT

ನಗರದ ನೆಮ್ಮದಿ ರುದ್ರಭೂಮಿ ಆವರಣದಲ್ಲಿರುವ ‘ಕಣಜ’ದಲ್ಲಿ ತರಬೇತಿ ನಡೆಯುತ್ತಿದೆ. ಪ್ರತಿ ವಾರಾಂತ್ಯದ ಎರಡು ದಿನ ತರಬೇತಿ ನೀಡಲಾಗುತ್ತದೆ. ಮಕ್ಕಳು ಹೆಚ್ಚು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇವರೆಲ್ಲರಿಗೂ ನಿರ್ಮಲಾ ಗೋಳಿಕೊಪ್ಪ ಗುರುವಾಗಿದ್ದಾರೆ. ಭಾಗವತಿಕೆ ತರಬೇತಿಯನ್ನು ಗಜಾನನ ಭಾಗವತ ತುಳಗೇರಿ ನೀಡುತ್ತಿದ್ದಾರೆ.

‘ಹೆಸರು, ಗೌರವ ತಂದುಕೊಟ್ಟಿರುವಯಕ್ಷಗಾನ ಕಲೆಗೆ ಕಿಂಚಿತ್ ಕೊಡುಗೆ ನೀಡಬೇಕೆಂಬ ಇಚ್ಛೆಯಿಂದ ಮೂರು ವರ್ಷಗಳ ಹಿಂದೆ ತರಬೇತಿ ನೀಡಲು ಮುಂದಾದೆವು. ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದ್ದು, ಹತ್ತಾರು ಮಕ್ಕಳು ಉತ್ಸುಕತೆಯಿಂದ ಕಲಿಯಲು ಮುಂದೆ ಬಂದರು’ ಎನ್ನುತ್ತಾರೆ ನಿರ್ಮಲಾ ಹೆಗಡೆ ಗೋಳಿಕೊಪ್ಪ.

‘ತರಬೇತಿ ಪಡೆದ ಹಲವರು ಹಿರಿಯ ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಯುವ ಪ್ರತಿಭೆಗಳು ಹಲವು ಪ್ರದರ್ಶನದಲ್ಲಿ ಪಾಲ್ಗೊಂಡು ಯಕ್ಷಗಾನ ಪ್ರತಿಭೆ ಪ್ರದರ್ಶಿಸಿದ್ದಾರೆ. ನಮ್ಮ ಬಳಿ ಕಲಿತ ವಿದ್ಯಾರ್ಥಿಗಳು ನಮ್ಮೆದುರು ಕಲಾ ಪ್ರದರ್ಶನ ನೀಡಿದಾಗ ಹೆಮ್ಮೆ ಜತೆಗೆ ಯಕ್ಷಗಾನ ಲೋಕಕ್ಕೆ ಕಲಾವಿದರೊಬ್ಬರನ್ನು ಪರಿಚಯಿಸಿದ ಸಾರ್ಥಕಭಾವ ಮೂಡುತ್ತದೆ’ ಎಂದರು.

ತಿಂಗಳಿಗೊಂದು ತಾಳಮದ್ದಲೆ:

‘ಯಕ್ಷಗಾನದಂತೆ ತಾಳಮದ್ದಲೆ ಜನರಿಗೆ ಹೆಚ್ಚು ಚಿರಪರಿಚಿತವಾಗಿರುವ ಕಲೆ. ಅದನ್ನು ಈಗಿನ ಪೀಳಿಗೆಗೆ ಕಲಿಸಿ ಕಲೆಯನ್ನು ವಿಸ್ತರಿಸುವುದು ನಮ್ಮ ಧ್ಯೇಯ’ ಎಂಬುದು ನಿರ್ಮಲಾ ಅವರ ಅನಿಸಿಕೆ.

‘ತಾಳಮದ್ದಲೆ ತರಬೇತಿ ಪಡೆಯಲು ಏಳು ಜನರು ಆಸಕ್ತಿಯಿಂದ ಬಂದಿದ್ದಾರೆ. ಪ್ರತಿ ತಿಂಗಳು ತಲಾ ಒಬ್ಬ ವಿದ್ಯಾರ್ಥಿಯ ಮನೆಯಲ್ಲೇ ತಾಳಮದ್ದಲೆ ಕೂಟ ಆಯೋಜಿಸುತ್ತೇವೆ. ಇದರಿಂದ ವಿದ್ಯಾರ್ಥಿಗಳಿಗೆ ಕಲೆಯ ಪ್ರಾಯೋಗಿಕ ಅನುಭವವೂ ದೊರೆಯುತ್ತದೆ. ಇನ್ನಷ್ಟು ಜನರಿಗೆ ಕಲೆಯ ಕುರಿತ ಆಸಕ್ತಿಯೂ ಹೆಚ್ಚುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.