ADVERTISEMENT

ನೀರಿನ ಕೊರತೆ, ದುರಸ್ತಿ ಕಾಣದ ರಸ್ತೆ

ಯಲ್ವಡಿಕವೂರ: ಅಭಿವೃದ್ದಿ ಪಥದಲ್ಲಿರುವ ಗ್ರಾ.ಪಂನಲ್ಲಿ ಮೂಲಸೌಕರ್ಯದ ಕೊರತೆ

ಮೋಹನ ನಾಯ್ಕ
Published 20 ಮಾರ್ಚ್ 2024, 7:36 IST
Last Updated 20 ಮಾರ್ಚ್ 2024, 7:36 IST
ವರ್ಷಗಳಿಂದ ಡಾಂಬರು ಕಾಣದ ಹಡೀನ್ ಬಾಳೆಹಿತ್ಲು ರಸ್ತೆ
ವರ್ಷಗಳಿಂದ ಡಾಂಬರು ಕಾಣದ ಹಡೀನ್ ಬಾಳೆಹಿತ್ಲು ರಸ್ತೆ   

ಭಟ್ಕಳ: ಪಟ್ಟಣಕ್ಕೆ ಸರಿಸಮನಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ ತಾಲ್ಲೂಕಿನ ಯಲ್ವಡಿಕವೂರ ಗ್ರಾಮ ಪಂಚಾಯಿತಿ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ.

ಯಲ್ವಡಿಕವೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡೀನ್, ಪುರವರ್ಗ, ಗಣೇಶ ನಗರ ಹಾಗೂ ಚೌಥನಿಯ ಕೀರ್ತಿ ನಗರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಪ್ರತಿ ವರ್ಷದ ಬೇಸಿಗೆಯಲ್ಲಿ ಈ ಭಾಗದ ಜನರಿಗೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.

‘ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸರ್ಕಾರದಿಂದ ಅನುದಾನ ಮಂಜೂರಾಗಿ, ಕಾಮಗಾರಿ ನಡೆದರೂ ಜನರಿಗೆ ಈವರೆಗೆ ನೀರು ಸಿಕ್ಕಿಲ್ಲ. ಲಕ್ಷಾಂತರ ಮೊತ್ತ ವ್ಯಯಿಸಿ ನಿರ್ಮಿಸಿದ ಜಲಸಂಗ್ರಹಾಗಾರಕ್ಕೆ ಪೈಪ್‍ಲೈನ್ ಸಂಪರ್ಕ ಕಲ್ಪಿಸಿದ್ದಾರೆ. ಆದರೆ, ಅಲ್ಲಿಂದ ನೀರು ಹರಿದು ಮನೆಗಳಿಗೆ ತಲುಪಿದ್ದು ನೋಡಿದವರಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಭಾಸ್ಕರ ನಾಯ್ಕ.

ADVERTISEMENT

‘ದೀರ್ಘಕಾಲದವರೆಗೆ ನೀರಿನ ಲಭ್ಯತೆ ಇರಬಹುದಾದ ಜಲಮೂಲ ಪರಿಗಣಿಸದೆ ಕಾಟಾಚಾರಕ್ಕೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಯೋಜನೆ ಅನುಷ್ಠಾನದ ಕಾರಣಕ್ಕೆ ಒಂದೆರಡು ಕೊಳವೆಬಾವಿ ಕೊರೆದು ಅಲ್ಲಿಂದ ನೀರಿನ ಸಂಪರ್ಕ ಸಿಗುವಂತೆ ಮಾಡಲಾಗಿತ್ತು. ನಿರೀಕ್ಷೆಯಂತೆ ನೀರು ಬಂದಿಲ್ಲ’ ಎಂದರು.

‘ಹುಯಿಲಮಿಡಿಯಲ್ಲಿ ಇಕೋ ಬೀಚ್ ಇದೆ. ನಿತ್ಯ ಇಲ್ಲಿರುವ ಸಸ್ಯಕಾಶಿ ಉದ್ಯಾನ, ಬೀಚ್ ನೋಡಿ ಆನಂದಿಸಲು ಜನರು ಆಗಮಿಸುತ್ತಾರೆ. ಆದರೆ ಇಲ್ಲಿಗೆ ತೆರಳುವ ರಸ್ತೆ ಸಂಪೂರ್ಣ ಹೊಂಡಮಯವಾಗಿ ವರ್ಷಗಳೇ ಕಳೆದಿದೆ. ಇದುವರೆಗೂ ಮರು ಡಾಂಬರೀಕರಣ ಮಾಡಿಲ್ಲ. ಕಳಪೆ ರಸ್ತೆಯಿಂದಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಸುಪ್ರಸಿದ್ದ ಕ್ಷೇತ್ರ ಸೋಡಿಗದ್ದೆಯ ಮುಂಭಾಗದ ಮುಲ್ಲಿಗದ್ದೆ ರಸ್ತೆ ಹೊಂಡಮಯವಾಗಿದ್ದು, ದುರಸ್ತಿ ಕಾರ್ಯ ನಡೆದಿಲ್ಲ. ಹಡೀನ್ ಭಾಗದ ಬಾಳೆಹಿತ್ಲು ಗ್ರಾಮ ರಸ್ತೆಯೂ ಹೊಂಡಮಯವಾಗಿದ್ದು ರಸ್ತೆ ಮರು ದುರಸ್ತಿಗೆ ಅನುದಾನ ನೀಡಿದ್ದು, ಕಾಮಗಾರಿ ಬಾಕಿ ಇದೆ’ ಎನ್ನುತ್ತಾರೆ ಸ್ಥಳೀಯರಾದ ನಾಗೇಂದ್ರ ನಾಯ್ಕ.

ಹಡೀನ್ ಭಾಗಕ್ಕೆ ಲಭ್ಯತೆ ಇರುವ ಕಡೆಯಿಂದ ನೀರು ಪೂರೈಸಲು ಸೂಚಿಸಲಾಗಿದೆ. ರಸ್ತೆಗಳ ಅಭಿವೃದ್ಧಿಗೆ ಚುನಾವಣೆ ಬಳಿಕ ಕ್ರಿಯಾಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸಲಾಗುತ್ತದೆ

-ವಿ.ಡಿ.ಮೊಗೇರ ತಾಲ್ಲೂಕು ಪಂಚಾಯಿತಿ ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.