ADVERTISEMENT

ಕಾರವಾರ: ಸೊಳ್ಳೆ ನಿಯಂತ್ರಣಕ್ಕೆ ಸಹಕರಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಮೇ 2022, 15:16 IST
Last Updated 30 ಮೇ 2022, 15:16 IST
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ, ‘ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ತಡೆಗೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ’ಯಲ್ಲಿ ಜಿ.ಪಂ ಸಿ.ಇ.ಒ ಪ್ರಿಯಾಂಗಾ.ಎಂ ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಮತ್ತು ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ಇದ್ದಾರೆ
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ, ‘ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ತಡೆಗೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ’ಯಲ್ಲಿ ಜಿ.ಪಂ ಸಿ.ಇ.ಒ ಪ್ರಿಯಾಂಗಾ.ಎಂ ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಮತ್ತು ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ಇದ್ದಾರೆ   

ಕಾರವಾರ: ‘ಮನೆಯ ಸುತ್ತಮುತ್ತ ಸೊಳ್ಳೆಗಳ ನಿಯಂತ್ರಣ ಹಾಗೂ ಅವುಗಳ ಸಂತಾನ ಉತ್ಪತ್ತಿ ತಾಣಗಳ ನಿರ್ಮೂಲನೆ ಕಾರ್ಯಕ್ರಮಗಳಲ್ಲಿ ಗ್ರಾಮ ಪಂಚಾಯಿತಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಿಯಾಂಗಾ.ಎಂ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ‘ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ತಡೆಗೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ’ಯಲ್ಲಿ ಅವರು ಮಾತನಾಡಿದರು.

‘ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಲ್ಲದಂತೆ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು. ನೀರಿನ ಪೈಪುಗಳ ಸೋರುವಿಕೆಯನ್ನು ಗುರುತಿಸಿ ಸರಿಪಡಿಸಬೇಕು. ನೀರು ಸರಬರಾಜು ಮಾಡುವ ಮೊದಲು ಸರಿಯಾದ ಪ್ರಮಾಣದಲ್ಲಿ ಕ್ಲೋರಿನೇಶನ್ ಮಾಡಬೇಕು. ನೈರ್ಮಲ್ಯ ಲೈನ್ ಮತ್ತು ಸರಬರಾಜು ಲೈನ್‍ಗಳನ್ನು ಪರಿವೀಕ್ಷಣೆಗೆ ಒಳಪಡಿಸಿ ದೋಷಗಳಿದ್ದರೆ ಸರಿಪಡಿಸಬೇಕು’ ಎಂದು ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಿದರು.

ADVERTISEMENT

‘ಜಿಲ್ಲೆಗೆ ವಲಸೆ ಬರುವ ಮೀನುಗಾರರಿಗೆ ರೋಗವಾಹಕ ಆಶ್ರಿತ ರೋಗಗಳ ಕುರಿತು ಮುಂಜಾಗ್ರತೆಯಾಗಿ ವೈದ್ಯರು ರಕ್ತ ತಪಾಸಣಾ ಶಿಬಿರ ಹಮ್ಮಿಕೊಳ್ಳಬೇಕು. ಲಾರ್ವಗಳನ್ನು ತಿನ್ನುವ ಗಪ್ಪಿ ಮೀನುಗಳ ನಿರ್ವಹಣೆಗಾಗಿ ಮೀನಿನ ಮರಿ ಮನೆಗಳನ್ನು ನಿರ್ಮಿಸಬೇಕು. ಅವಶ್ಯವಿರುವ ಸಂಖ್ಯೆಯ ಮೀನುಗಳನ್ನು ಒದಗಿಸಬೇಕು‌’ ಎಂದು ಮೀನುಗಾರಿಕೆ ಇಲಾಖೆಗೆ ಸೂಚಿಸಿದರು.

‘ಸಾರಿಗೆ ಇಲಾಖೆಯ ಡಿಪೊಗಳಲ್ಲಿ ಉಪಯೋಗಿಸದ ಟೈರ್‌ಗಳು ಹಾಗೂ ಬಿಡಿಭಾಗಗಳಲ್ಲಿ ನೀರು ನಿಂತು ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ಅವುಗಳನ್ನು ನಿರ್ಮೂಲನೆ ಮಾಡಬೇಕು’ ಎಂದು ಸಾರಿಗೆ ಇಲಾಖೆಗೆ ತಾಕೀತು ಮಾಡಿದರು.

‘ಶಾಲೆಗಳಲ್ಲಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಮಕ್ಕಳಿಗೆ ಲಾರ್ವಾಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ತಿಳಿಸಿದರು.

ಸರ್ಕಾರಿ ಕಟ್ಟಡ ನಿರ್ಮಾಣ ಹಾಗೂ ಸರ್ಕಾರಿ ಆಸ್ಪತ್ರೆ ಕ್ವಾರ್ಟರ್ಸ್‌ಗಳ ನವೀಕರಣ ಕಾರ್ಯವನ್ನು ಕೂಡಲೇ ಪೂರ್ಣಗಳಿಸಬೇಕು ಎಂದು ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.