ADVERTISEMENT

ಆಧಾರ್‌ಗೆ ಮತದಾರರ ಚೀಟಿ ಜೋಡಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 15:45 IST
Last Updated 28 ನವೆಂಬರ್ 2022, 15:45 IST
ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಕುರಿತು ಕಾರವಾರದಲ್ಲಿ ಸೋಮವಾರ ನಡೆದ ವಿಡಿಯೊ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಜಿ.ಪಂ ಸಿಇಒ ಪ್ರಿಯಾಂಗಾ.ಎಂ ಮಾತನಾಡಿದರು
ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಕುರಿತು ಕಾರವಾರದಲ್ಲಿ ಸೋಮವಾರ ನಡೆದ ವಿಡಿಯೊ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಜಿ.ಪಂ ಸಿಇಒ ಪ್ರಿಯಾಂಗಾ.ಎಂ ಮಾತನಾಡಿದರು   

ಕಾರವಾರ: ‘ಎಲ್ಲ ಮತದಾರರ ಚೀಟಿಗಳ ಸಂಖ್ಯೆಯನ್ನು ಅವರ ಆಧಾರ್ ಸಂಖ್ಯೆಗೆ ಜೋಡಿಸುವ ಪ್ರಕ್ರಿಯೆ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ‘ಸ್ವೀಪ್’ ಸಮಿತಿ ರಚಿಸಿಕೊಳ್ಳಬೇಕು. ಮತದಾರರ ಜಾಗೃತಿ ಕಾರ್ಯಕ್ರಮಗಳ ಆಯೋಜನೆಗೆ ನಿಗಾ ವಹಿಸಬೇಕು’ ಜಿಲ್ಲಾ ‘ಸ್ವೀಪ್’ ಸಮಿತಿಯ ಅಧ್ಯಕ್ಷೆ ಪ್ರಿಯಾಂಗಾ.ಎಂ ಸೂಚಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಕುರಿತು ಸೋಮವಾರ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳ ವಿಡಿಯೊ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮಾಹಿತಿ ತಿದ್ದುಪಡಿಗೆ ಸಂಬಂಧಿಸಿ ಚುನಾವಣಾ ಆಯೋಗವು ಮೂರು ಪ್ರಕಾರಗಳ ನಮೂನೆಗಳನ್ನು ಬಿಡುಗಡೆ ಮಾಡಿದೆ. ಜಿಲ್ಲೆಯಾದ್ಯಂತ ಈ ಮಾದರಿಯಲ್ಲಿ ಮತದಾರರಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿರುವ ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು, ಹಿರಿಯ ನಾಗರಿಕರು, ಬುಡಕಟ್ಟು ಜನಾಂಗದವರು ಸೇರಿದಂತೆ ವಿವಿಧ ವಿಶೇಷ ವರ್ಗದವರ ಬಗ್ಗೆ ಗಮನಹರಿಸಬೇಕು. ಅವರ ಹೆಸರನ್ನು ಮತದಾರರ ಗುರುತಿನ ಪಟ್ಟಿಯಲ್ಲಿ ನೋಂದಾಯಿಸಲು ಅಧಿಕಾರಿಗಳು ಕ್ರಮ ವಹಿಸಬೇಕಿದೆ’ ಎಂದು ನಿರ್ದೇಶನ ನೀಡಿದರು.

‘18 ವರ್ಷದ ಮೇಲಿನ ಎಲ್ಲರ ಹೆಸರನ್ನು ನೋಂದಣಿ ಮಾಡಿಸಿ ಈ ಮಾಹಿತಿಯನ್ನು ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಗೆ ಮಾಹಿತಿ ನೀಡಬೇಕು. ಸ್ವ ಸಹಾಯ ಸಂಘಗಳ ಮಹಿಳೆಯರ ನೋಂದಣಿ ಅಥವಾ ಹೆಸರು ತಿದ್ದುಪಡಿ ಆಗುವಂಥವರ ಮಾಹಿತಿಯನ್ನು ಸಿಬ್ಬಂದಿ ನೀಡಬೇಕು.‌ ಪ್ರತಿ ಗ್ರಾಮ ಪಂಚಾಯಿತಿಯ ಕಸ ಸಂಗ್ರಹ ವಾಹನದಲ್ಲಿ ಹಾಡುಗಳ ಮೂಲಕ ಪ್ರಚಾರ ಮಾಡಬೇಕು. ಯುವಕ ಸಂಘಗಳನ್ನು ಬಳಸಿಕೊಂಡು ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಮಿತಿಯ ಸದಸ್ಯರು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.