ಹೊಸಪೇಟೆ (ವಿಜಯನಗರ): ಅಂಧತ್ವ ಪ್ರಮಾಣ ದರವನ್ನು ಇಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವ ಉದ್ದೇಶದಿಂದ ಜಿಲ್ಲೆಯ 12 ಕಡೆಗಳಲ್ಲಿ ದೃಷ್ಟಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶಂಕರನಾಯ್ಕ ಎಲ್.ಆರ್. ತಿಳಿಸಿದರು.
ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿದ ನೂತನ ಆಶಾಕಿರಣ ದೃಷ್ಟಿಕೇಂದ್ರವನ್ನು ಗುರುವಾರ ಅವರು ಉದ್ಘಾಟಿಸಿ ಮಾತನಾಡಿದರು.
‘ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೂಡ್ಲಿಗಿ, ಹಡಗಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ಹಂಪಸಾಗರ, ಇಟಿಗಿ, ತೆಲಗಿ, ಅರಸೀಕೆರಿ, ಚಿಕ್ಕಜೋಗಿಹಳ್ಳಿ, ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೃಷ್ಟಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ’ ಎಂದರು.
‘ಇಲ್ಲಿ ಪರೀಕ್ಷೆ ನಡೆಸಿ ಉಚಿತವಾಗಿ ಕನ್ನಡಕ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆ ಅಗತ್ಯ ಇದ್ದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ’ ಎಂದರು.
‘2024-25ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಒಟ್ಟು 4,333 ಕನ್ನಡಕಗಳು ಹಾಗೂ ಜಿಲ್ಲೆಯಲ್ಲಿ 1,580 ಕನ್ನಡಕಗಳನ್ನು ಉಚಿತವಾಗಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಜೊತೆಗೆ 2025-26ನೇ ಸಾಲಿನಲ್ಲಿ 10,500 ಜನ ಫಲಾನುಭವಿಗಳನ್ನು ಗುರುತಿಸಿ ಉಚಿತ ಕನ್ನಡಕಗಳನ್ನು ವಿತರಿಸುವ ಗುರಿ ಹೊಂದಲಾಗಿದೆ’ ಎಂದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಕೆ.ರಾಧಿಕಾ, ಜಿಲ್ಲಾ ಕ್ಷಯರೋಗ ನಿರ್ಮೂಲಾಧಿಕಾರಿ ಡಾ.ಡಿ.ಭಾಸ್ಕರ್, ಮುಖ್ಯ ವೈದ್ಯಾಧಿಕಾರಿ ಡಾ.ಹರಿಪ್ರಸಾದ್, ನೇತ್ರ ತಜ್ಞ ಡಾ.ರಾಜಶೇಖರ್, ಡಾ.ರಾಘವೇಂದ್ರ, ಡಾ.ಕೊಟ್ರೇಶ್, ನೇತ್ರಾಧಿಕಾರಿ ನಜಬುನ್ನಿಸಾ ಬೇಗಂ, ವಾಣಿಶ್ರೀ, ವೆಂಕಟೇಶ್, ಹನುಮಂತರೆಡ್ಡಿ, ಗಿಡ್ಡ ಗಂಗಪ್ಪ, ಗುಂಡಿ ರಾಘು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.