ADVERTISEMENT

14 ತಿಂಗಳಲ್ಲಿ ₹900 ಕೋಟಿ ಅನುದಾನ- ಸಚಿವ ಆನಂದ್‌ ಸಿಂಗ್‌

ಸಮ್ಮಿಶ್ರ ಸರ್ಕಾರ, ಕೋವಿಡ್‌ನಲ್ಲಿ ಕೆಲಸ ಮಾಡಲಾಗಲಿಲ್ಲ–ಸಚಿವ ಆನಂದ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 12:21 IST
Last Updated 27 ಫೆಬ್ರುವರಿ 2023, 12:21 IST
ಹೊಸಪೇಟೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಸಚಿವರಾದ ಆನಂದ್‌ ಸಿಂಗ್‌, ಬಿ. ಶ್ರೀರಾಮುಲು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಯ್ಯದ್‌ ಅಮಾನುಲ್ಲಾ, ಸಂಸದ ವೈ.ದೇವೇಂದ್ರಪ್ಪ, ಹುಡಾ ಅಧ್ಯಕ್ಷ ಅಶೋಕ್‌ ಜೀರೆ ಹಾಜರಿದ್ದರು–ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಸಚಿವರಾದ ಆನಂದ್‌ ಸಿಂಗ್‌, ಬಿ. ಶ್ರೀರಾಮುಲು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಯ್ಯದ್‌ ಅಮಾನುಲ್ಲಾ, ಸಂಸದ ವೈ.ದೇವೇಂದ್ರಪ್ಪ, ಹುಡಾ ಅಧ್ಯಕ್ಷ ಅಶೋಕ್‌ ಜೀರೆ ಹಾಜರಿದ್ದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ‘ಐದು ವರ್ಷಗಳಲ್ಲಿ 47 ತಿಂಗಳು ನನಗೆ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಲು ಆಗಲಿಲ್ಲ. 14 ತಿಂಗಳಲ್ಲಿ ₹900 ಕೋಟಿ ಅನುದಾನ ವಿಜಯನಗರಕ್ಕೆ ತಂದಿರುವೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದ ₹283.84 ಕೋಟಿ ಮೊತ್ತದ 241 ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಾಗೂ ಕೋವಿಡ್‌ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಯಾವುದೇ ಯೋಜನೆಗಳನ್ನು ತರಲಾಗಲಿಲ್ಲ. ಆದರೆ, ಜಿಲ್ಲೆ ಘೋಷಣೆಯಾದ ನಂತರ 15 ರಿಂದ 18 ತಿಂಗಳ ಅವಧಿಯಲ್ಲಿ ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದಿರುವೆ. ನಾನು ಪಟ್ಟ ಕಷ್ಟ ನನಗೆ ಹಾಗೂ ನನ್ನ ಸಹದ್ಯೋಗಿಗಳಿಗೆ ಗೊತ್ತು ಎಂದು ಹೇಳಿದರು.

ADVERTISEMENT

ಸಮ್ಮಿಶ್ರ ಸರ್ಕಾರ, ಕೋವಿಡ್ ಸಂದರ್ಭ ಹೊರತುಪಡಿಸಿ ಉಳಿದ 18 ತಿಂಗಳ ಅವಧಿಯಲ್ಲಿಯೇ ವಿಜಯನಗರ ಜಿಲ್ಲೆ ಸ್ಥಾಪನೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಸಾವಿರ ಕೋಟಿ ವರೆಗೆ ಅನುದಾನವನ್ನು ಒದಗಿಸಿ ಜಿಲ್ಲೆಯ ಮತ್ತು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆರ್ಥಿಕ ಇಲಾಖೆ ಅನುಮೋದನೆ ಸಿಕ್ಕ ಬಳಿಕ ನೂತನ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಕ್ಕಿತು. ಗ್ರಾಮೀಣ ಪ್ರದೇಶಗಳಲ್ಲಿ ಸಹ ಕುಡಿಯುವ ನೀರು, ಏತನೀರಾವರಿ ಸೇರಿದಂತೆ ಇತರೆ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.

ಬರುವ ದಿನಗಳಲ್ಲಿ ಎಂಜಿನಿಯರಿಂಗ್‌, ಮೆಡಿಕಲ್, ನರ್ಸಿಂಗ್, ಪಾಲಿಟೆಕ್ನಿಕ್, ಸಣ್ಣ ಕೈಗಾರಿಕೆ ಕ್ಲಸ್ಟರ್ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತದೆ. ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡುವುದು ಖಚಿತ. ‘ಹಂಪಿ ಶುಗರ್ಸ್‘ ಮಾಡುವ ಕನಸಿದೆ. ನನಗೆ ಹೆದರಿಕೆ ಇದೆ. ಆದರೆ, 15–20 ದಿನಗಳಲ್ಲಿ ಭೂಮಿಪೂಜೆ ಮಾಡುವ ವಿಶ್ವಾಸ ಇದೆ. ಸರ್ಕಾರದ ಆದೇಶ ಬರುವ ಸಾಧ್ಯತೆ ಇದೆ. ಮುದ್ಲಾಪುರ ಬಳಿ ಮೇಲ್ಸೇತುವೆ ಬರಲಿದೆ. ನನ್ನ ವಿರುದ್ಧ ಅನೇಕ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ರಾಜಕೀಯದಲ್ಲಿ ವಿರೋಧ ಪಕ್ಷದವರು, ಆಡಳಿತ ಪಕ್ಷದವರು ಹೇಳುವುದು ಸಹಜ. ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದರು.

ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಸಚಿವ ಆನಂದ್ ಸಿಂಗ್ ಹಾಗೂ ನೂತನ ಜಿಲ್ಲೆಯ ಅಧಿಕಾರಿಗಳಿಂದ ಹೊಸ ಜಿಲ್ಲೆ ಸಮಗ್ರ ಅಭಿವೃದ್ಧಿ ಕಾಣುತ್ತಿದೆ. ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಜಿಲ್ಲೆ ಘೋಷಣೆಯಾದ ನಂತರ ಅಭಿವೃದ್ಧಿಯನ್ನು ಸವಾಲಾಗಿ ಸ್ವೀಕರಿಸಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ₹5 ಸಾವಿರ ಕೋಟಿ ಅನುದಾನ ಘೋಷಿಸಿದ್ದಾರೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ. ಕೂಡ್ಲಿಗಿ, ಸಂಡೂರಿನಲ್ಲಿ ಕೆರೆ ತುಂಬಿಸುವ ಯೋಜನೆಗಳಿಗೂ ಚಾಲನೆ ಕೊಡಲಾಗಿದೆ. ಬರುವ ದಿನಗಳಲ್ಲಿ ಮುಖ್ಯಮಂತ್ರಿಗಳು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಮನಾಂತರ ಜಲಾಶಯಕ್ಕೂ ಯೋಜನೆ ರೂಪಿಸಲಿದ್ದಾರೆ ಎಂದರು.

ಸಂಸದ ವೈ. ದೇವೇಂದ್ರಪ್ಪ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಎಸ್ಪಿ ಶ್ರೀಹರಿ ಬಾಬು ಬಿ.ಎಲ್., ಜಿ.ಪಂ ಸಿಇಒ ಸದಾಶಿವಪ್ರಭು ಬಿ., ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್, ಹುಡಾ ಅಧ್ಯಕ್ಷ ಅಶೋಕ್ ಜೀರೆ, ಕಮಲಾಪುರ ಪುರಸಭೆ ಅಧ್ಯಕ್ಷ ಸೈಯದ್ ಅಮಾನುಲ್ಲಾ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.