
ಹಗರಿಬೊಮ್ಮನಹಳ್ಳಿ: ‘ಖಾಸಗಿ ವ್ಯಕ್ತಿಗಳ ಮಾತು ಕೇಳುವ ಅಧಿಕಾರಿಗಳು ಮೂರ್ಖರು. ತಹಶೀಲ್ದಾರ್ ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ನೇಮರಾಜನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹಳೇ ಊರಿನಲ್ಲಿ ಪುರಸಭೆಯಿಂದ ಗುರುವಾರ ಹಮ್ಮಿಕೊಂಡಿದ್ದ ಬೈಲು ಪತ್ತಾರರಿಗೆ ನಿವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕೆಲವು ಅಧಿಕಾರಿಗಳು ಬಡವರ ಆಸ್ತಿ ಕಬಳಿಸಲು ಮುಂದಾಗಿದ್ದಾರೆ. ಅಂಥವರನ್ನು 24 ಗಂಟೆಗಳಲ್ಲಿ ಸೇವೆಯಿಂದ ಅಮಾನತು ಮಾಡಿಸುವುದಾಗಿ ಎಚ್ಚರಿಕೆ ನೀಡಿದರು.
ಹಕ್ಕುಪತ್ರ ವಿತರಣಾ ಕಾರ್ಯಕ್ರಮ ನಡೆಯಬಾರದೆಂದು ಕೆಲವರು ಬುಧವಾರ ಮಧ್ಯರಾತ್ರಿವರೆಗೂ ಪ್ರಯತ್ನ ಪಟ್ಟಿದ್ದಾರೆ. ಕಳೆದ 10 ವರ್ಷಗಳಲ್ಲಿ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ. ಈಗ ಅದಕ್ಕೆ ಅವಕಾಶ ಇಲ್ಲ. 27 ಸ್ವಸಹಾಯ ಸಂಘಗಳಿಗೆ ಎರಡು ವರ್ಷಗಳಿಂದ ಸಹಾಯಧನದ ಚೆಕ್ ವಿತರಿಸಲಿರಲಿಲ್ಲ. ಈಚೆಗೆ ತಾವೇ ಖುದ್ದಾಗಿ ಸಂಘದ ಪದಾಧಿಕಾರಿಗಳನ್ನು ಕರೆಯಿಸಿ ವಿತರಣೆ ಮಾಡಿದ್ದೇನೆ’ ಎಂದರು.
ಕ್ಷೇತ್ರದಲ್ಲಿನ ಮೂರು ಪಟ್ಟಣಗಳಿಗೆ ಜನಸಂಖ್ಯೆಗೆ ಆಧಾರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಅಮೃತ್ ಯೋಜನೆಯಡಿ ₹83 ಕೋಟಿ ಅಂದಾಜು ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದರು.
ಪುರಸಭೆ ಸದಸ್ಯರಾದ ದೀಪಕ್ ಸಾ ಕಠಾರೆ, ನಾಗರಾಜ ಜನ್ನು, ಚನ್ನಮ್ಮ ವಿಜಯಕುಮಾರ್, ಅಂಬಳಿ ಮಂಗಳಾ ರವೀಂದ್ರಗೌಡ, ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್, ಸಮುದಾಯ ಸಂಘಟನಾ ಅಧಿಕಾರಿ ಬಸವರಾಜ, ಮುಖಂಡರಾದ ಮೃತ್ಯುಂಜಯ ಬದಾಮಿ, ಎಚ್.ಎಂ.ವಿಜಯಕುಮಾರ್, ಚಿತ್ತವಾಡಿಗಿ ಪ್ರಕಾಶ್, ಈ.ಕೃಷ್ಣಮೂರ್ತಿ, ನಾಣ್ಯಾಪುರ ಕೃಷ್ಣಮೂರ್ತಿ, ರಾಮರೆಡ್ಡಿ, ಪಾಂಡುನಾಯ್ಕ, ರಾಜು ಪಾಟೀಲ ಇದ್ದರು.
‘ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರು ಒಳ್ಳೆಯ ಸಚಿವರು, ಒಳ್ಳೆಯ ಕೆಲಸಗಾರರು. ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸುತ್ತಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವೆ’ ಎಂದು ಜೆಡಿಎಸ್ ಶಾಸಕ ನೇಮರಾಜ ನಾಯ್ಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.