
ಹೊಸಪೇಟೆ (ವಿಜಯನಗರ): ಶತಶತಮಾನಗಳಿಂದ ಮೀಸಲಾತಿಯಿಂದ ವಂಚನೆಗೆ ಒಳಗಾದ ಸಮುದಾಯಗಳಿಗೆ ಇದೀಗ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಾನವಾಗಿದೆ. ಇದು ಪರಿಪೂರ್ಣವಾಗಿ ನಡೆಯಬೇಕಿದ್ದು, ಕೊನೆಗೊಳಿಸುವ ಗಡುವನ್ನು ಇನ್ನೂ 10 ದಿನ ವಿಸ್ತರಿಸಬೇಕು ಎಂದು ವಿಜಯನಗರ ಜಿಲ್ಲಾ ಅಹಿಂದ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.
ವೇದಿಕೆಯ ಅಧ್ಯಕ್ಷ ಬುಡ್ಡಿ ಬಸವರಾಜ್ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಈ ಸಮೀಕ್ಷೆ ಮೂಲಕ ಆಗುತ್ತಿದೆ, ವಿಜಯನಗರ ಜಿಲ್ಲೆಯಲ್ಲಿ ಸದ್ಯ ಶೇ 65ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ, ಇನ್ನು ಎರಡು ದಿನದಲ್ಲಿ ಅದು ಪೂರ್ಣಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಈ ಗಡುವನ್ನು 10 ದಿನ ವಿಸ್ತರಿಸಬೇಕು ಎಂದರು.
‘ಮೇಲ್ವರ್ಗದವರು ಸಾಮಾಜಿಕ ಸಮೀಕ್ಷೆಗೆ ಅಡ್ಡಿಪಡಿಸುವುತ್ತಿರುವದು ಖಂಡನೀಯ. ಸುಳ್ಳು ಮಾಹಿತಿ ನೀಡಿ ಮೀಸಲಾತಿ ಪಡೆದವರ ಬಣ್ಣ ಈ ಸಮೀಕ್ಷೆಯ ಮೂಲಕ ಬಯಲಾಗಲಿದೆ ಎಂಬ ಆತಂಕದಿಂದ ಸಮೀಕ್ಷೆಯ ವಿರುದ್ಧ ಪಿತೂರಿ ನಡೆಯುತ್ತಿದೆ. ಇದು ಅಹಿಂದ ವರ್ಗಕ್ಕೆ ದ್ರೋಹ ಎಸಗಲು ಮಾಡುವ ಕೃತ್ಯವಾಗಿದೆ’ ಎಂದು ಅವರು ಹೇಳಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಣ್ಣದಮನೆ ಸೋಮಶೇಖರ್ ಮಾತನಾಡಿ, ಮನುವಾದಿಗಳು ಸಮೀಕ್ಷೆಗೆ ಅಡ್ಡಿಪಡಿಸುತ್ತಿದ್ದರೂ ಸರ್ಕಾರ ದಿಟ್ಟ ನಿರ್ಧಾರಕ್ಕೆ ಬದ್ಧವಾಗಿರುವುದು ಶ್ಲಾಘನೀಯ, ಸಮೀಕ್ಷೆಯ ಬಳಿಕ ಪಡಿತರ ಚೀಟಿ ರದ್ದಾಗುತ್ತದೆ ಎಂಬಂತಹ ಆತಂಕಗಳಿಗೆ ಅರ್ಥವಿಲ್ಲ, ಇಂತಹ ವದಂತಿ ಹಬ್ಬಿಸುವವರ ಮಾತಿಗೆ ಕಿವಿಗೊಡಬಾರದು ಎಂದರು.
ಅಲ್ಪಸಂಖ್ಯಾತ ಸಮುದಾಯದ ಮುಖಂಡ ಸದ್ದಾಂ ಅಡ್ವಕೇಟ್ ಮಾತನಾಡಿ, ಇದು ಎನ್‌ಆರ್‌ಸಿ ಅಲ್ಲ ಎಂಬುದನ್ನು ಅಲ್ಪಸಂಖ್ಯಾತರು ಮೊದಲು ಅರಿತುಕೊಳ್ಳಬೇಕು, ಸಮೀಕ್ಷೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಹಾಲುಮತ ಸಮಾಜದ ಮುಖಂಡ ರವಿಕುಮಾರ್ ಮಾತನಾಡಿ, ಸಮೀಕ್ಷೆ ಕುರಿತು ದಾರಿ ತಪ್ಪಿಸುವವರ ಕುರಿತು ಎಚ್ಚರದಿಂದ ಇರಬೇಕು ಎಂದರು.
ಮುಖಂಡರಾದ ಜೆ.ಶಿವಕುಮಾರ್, ಬಾಣದ ಪ್ರಶಾಂತ್, ಅಲ್ತಾಫ್ ಮಕಂದರ್, ಈರಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.