ADVERTISEMENT

ವಿಜಯನಗರ: ಇಂದು ಶಿವದೇಗುಲದಲ್ಲಿ ವಿಶೇಷ ಪೂಜೆ

ಮಹಾಶಿವರಾತ್ರಿಗೆ ದೇವಸ್ಥಾನಗಳಲ್ಲಿ ಜಾಗರಣೆ, ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 19:30 IST
Last Updated 10 ಮಾರ್ಚ್ 2021, 19:30 IST
ಮಹಾಶಿವರಾತ್ರಿಯ ಮುನ್ನ ದಿನ ಬುಧವಾರ ಸಂಜೆ ಹೊಸಪೇಟೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಅಲಂಕರಿಸಿದ ಆಟೊಗಳ ಮೇಲೆ ಶಿವಲಿಂಗ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು 
ಮಹಾಶಿವರಾತ್ರಿಯ ಮುನ್ನ ದಿನ ಬುಧವಾರ ಸಂಜೆ ಹೊಸಪೇಟೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಅಲಂಕರಿಸಿದ ಆಟೊಗಳ ಮೇಲೆ ಶಿವಲಿಂಗ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು    

ವಿಜಯನಗರ (ಹೊಸಪೇಟೆ): ಗುರುವಾರ (ಮಾ.11) ಮಹಾಶಿವರಾತ್ರಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಣೆಗೆ ಸಕಲ ಸಿದ್ಧತೆಗಳು ದೇವಸ್ಥಾನದಲ್ಲಿ ಪೂರ್ಣಗೊಂಡಿವೆ.

ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ವಿರೂಪಾಕ್ಷೇಶ್ವರನಿಗೆ ಗುರುವಾರ ಚಿನ್ನದ ಕಿರೀಟ ತೊಡಿಸಿ, ವಿಶೇಷ ರೀತಿಯಲ್ಲಿ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತದೆ. ಇದನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಜಿಲ್ಲೆ ಸೇರಿದಂತೆ ನೆರೆಯ ಬಳ್ಳಾರಿ, ಕೊಪ್ಪಳ, ರಾಯಚೂರು, ಗದಗ, ದಾವಣಗೆರೆ ಜಿಲ್ಲೆಗಳಿಂದ ಭಕ್ತರು ಬರುತ್ತಾರೆ. ಅಲ್ಲಿಯೇ ಭಕ್ತರು ಲಿಂಗಪೂಜೆ ಮಾಡುತ್ತಾರೆ.

ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದಿಂದ ಸಂಜೆ 7ಕ್ಕೆ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಭಕ್ತಿ ಭಾವನಾ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಉದ್ಘಾಟಿಸುವರು. ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ADVERTISEMENT

ನಗರದ ಮಾರ್ಕಂಡೇಶ್ವರ ದೇವಸ್ಥಾನವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಭಕ್ತರು ಸಾಲುಗಟ್ಟಿ ದರ್ಶನ ಪಡೆಯಲು ಬ್ಯಾರಿಕೇಡ್‌ ನಿರ್ಮಿಸಲಾಗಿದೆ. ಇನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ನಗರದ ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ 85 ಜ್ಯೋತಿರ್ಲಿಂಗಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹಬ್ಬಕ್ಕೂ ಮುನ್ನ ದಿನ ಬುಧವಾರ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಅಲಂಕರಿಸಿದ ಆಟೊಗಳ ಮೇಲೆ ಪ್ರತಿಷ್ಠಾಪಿಸಿ ನಗರದ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಮಾಡಲಾಯಿತು. ಬ್ರಹ್ಮಕುಮಾರಿಯ ಕಾರ್ಯಕರ್ತೆಯರು, ಡೊಳ್ಳು ಕಲಾವಿದರ ತಂಡ ಪ್ರಮುಖ ಆಕರ್ಷಣೆಯಾಗಿತ್ತು.

ಹಬ್ಬದ ಪ್ರಯುಕ್ತ ಬುಧವಾರ ಸಂಜೆ ನಗರದ ಸೋಗಿ ಮಾರುಕಟ್ಟೆ, ಮಹಾತ್ಮ ಗಾಂಧಿ ವೃತ್ತದಲ್ಲಿ ಜನದಟ್ಟಣೆ ಕಂಡು ಬಂತು. ಜನ ಹೂ, ಹಣ್ಣು, ಕಾಯಿ, ಬಾಳೆದಿಂಡು ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಿ ಕೊಂಡೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.