ADVERTISEMENT

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 9:07 IST
Last Updated 7 ಫೆಬ್ರುವರಿ 2023, 9:07 IST
   

ಹೊಸಪೇಟೆ (ವಿಜಯನಗರ): 'ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ (ಬಿಡಿಸಿಸಿ) ಇತ್ತೀಚೆಗೆ ನಡೆದ 58 ಹುದ್ದೆಗಳ ನೇಮಕಾತಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ' ಎಂದು ಬ್ಯಾಂಕಿನ ಆಡಳಿತ ಮಂಡಳಿಯವರು ಸ್ಪಷ್ಟನೆ ನೀಡಿದರು

ಬ್ಯಾಂಕಿನ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಸಿಇಒ ಪಿ.ಎಸ್. ಹರೀಶ್ ಹಾಗೂ ನಿರ್ದೇಶಕರಾದ ಟಿ.ಎಂ. ಚಂದ್ರಶೇಖರಯ್ಯ, ಎಲ್. ಎಸ್. ಆನಂದ್, ಜೆ.ಎಂ‌. ವೃಷಬೇಂದ್ರಯ್ಯ, ಐಗೋಳ ಚಿದಾನಂದ, ಡಿ. ಭೋಗಾರೆಡ್ಡಿ, ಬಿ‌.ಕೆ. ಪ್ರಕಾಶ್ ಅವರು ಮಂಗಳವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮೇಲಿನಂತೆ ಸ್ಪಷ್ಟೀಕರಣ ನೀಡಿದರು.

ಕಾಂಗ್ರೆಸ್ ಮುಖಂಡ ರಾಜಶೇಖರ್ ಹಿಟ್ನಾಳ್ ಅವರು ಬಿಡಿಸಿಸಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಆರೋಪ ಮಾಡುವುದಕ್ಕೂ ಮುನ್ನ ಅವರು ಬ್ಯಾಂಕಿನ ಇತಿಹಾಸ ಅರಿಯಬೇಕು. ಸರ್ಕಾರದ ನಿಯಮ, ಸುತ್ತೋಲೆಗಳ ಪ್ರಕಾರ ನೇಮಕಾತಿ ಪ್ರಕ್ರಿಯೆ ಆಗಿದೆ. ಅವರ ಆರೋಪಗಳೆಲ್ಲ ಸುಳ್ಳು, ಅದನ್ನು ಸಾರಾಸಗಟು ತಿರಸ್ಕರಿಸುತ್ತೇವೆ ಎಂದರು.

ADVERTISEMENT

ಹಿಟ್ನಾಳ್ ಅವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ಬ್ಯಾಂಕಿನ ಘನತೆ, ಗೌರವ ಕಳೆಯುವ ಹೇಳಿಕೆ ಕೊಟ್ಟಿದ್ದಾರೆ. ಲಕ್ಷಾಂತರ ಗ್ರಾಹಕರು, ರೈತರನ್ನು ಒಳಗೊಂಡಿರುವ ಬ್ಯಾಂಕಿಗೆ ಉತ್ತಮ ಇತಿಹಾಸವಿದೆ. ಬ್ಯಾಂಕಿನ ಎಲ್ಲ ಸಿಬ್ಬಂದಿ ಕಾನೂನು ಪ್ರಕಾರ ಆಯ್ಕೆಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಹಕಾರ ಇಲಾಖೆಯ ನಿಬಂಧಕರ ಅನುಮತಿ ಪಡೆದು, ಐವರು ಸದಸ್ಯರನ್ನು ಒಳಗೊಂಡ ಸಮಿತಿ ಮೂಲಕ ಹುದ್ದೆಗಳನ್ನು ತುಂಬಲಾಗಿದೆ. ಪರೀಕ್ಷೆ, ಸಂದರ್ಶನ ನಿಯಮದ ಪ್ರಕಾರ ನಡೆಸಲಾಗಿದೆ. ಒಟ್ಟು 286 ಜನ ಸಂದರ್ಶನಕ್ಕೆ ಹಾಜರಾಗಿದ್ದರು. ಇದರಲ್ಲಿ 58 ಜ‌ನ ಆಯ್ಕೆ ಆಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ಬ್ಯಾಂಕಿನ ವಿಶ್ವಾಸಾರ್ಹತೆ ಹೋಗುವ ರೀತಿಯಲ್ಲಿ ರಾಜಶೇಖರ್ ಹಿಟ್ನಾಳ್ ಹೇಳಿಕೆ ಕೊಟ್ಟಿದ್ದಾರೆ‌. ಅವರ ಆರೋಪ ಖಂಡನಾರ್ಹ. ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಅವರ ವಿರುದ್ಧ ಯಾವ ರೀತಿಯ ಕ್ರಮ ಜರುಗಿಸಬಹುದು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೊ ನೈಜತೆ ಬಗ್ಗೆ ಆಡಳಿತ ಮಂಡಳಿಯಿಂದ ತನಿಖೆ ನಡೆಸಲಾಗುವುದು. ಅಲ್ಲದೇ ಅದಕ್ಕೆ ಸಂಬಂಧಿಸಿದ ತಜ್ಞರ ಜತೆಗೂ ಚರ್ಚಿಸಲಾಗುವುದು. ಹಿಟ್ನಾಳ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ನಮ್ಮಲ್ಲೂ ಅನೇಕರಿದ್ದಾರೆ. ಅವರು ಆರೋಪ ಮಾಡುವುದಕ್ಕೂ ಮುನ್ನ ನಮ್ಮ ಬಳಿ ಬಂದು ಚರ್ಚಿಸಬಹುದಿತ್ತು ಎಂದರು.


ಸಂದೀಪ್ಗೂ ಬ್ಯಾಂಕಿಗೂ ಸಂಬಂಧವಿಲ್ಲ
ಬಿಡಿಸಿಸಿ ಅಧ್ಯಕ್ಷ,‌ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಅಳಿಯ ಸಂದೀಪ್ ಸಿಂಗ್ ಗೂ ಈ ಬ್ಯಾಂಕಿಗೂ ಯಾವುದೇ ಸಂಬಂಧವಿಲ್ಲ. ಬ್ಯಾಂಕಿನ ಶತಮಾನೋತ್ಸವದ ಸಂದರ್ಭದಲ್ಲಿ ಕೆಲವು ವಿಚಾರಗಳಲ್ಲಿ ಅವರು ಸಲಹೆ ಕೊಟ್ಟಿದ್ದರು ಎಂದು ಆಡಳಿತ ಮಂಡಳಿಯವರು ತಿಳಿಸಿದರು.


ರಾಜಶೇಖರ್ ಹಿಟ್ನಾಳ್ ಅವರಿಗೆ ವಿಜಯನಗರದಲ್ಲಿ ಸ್ಪರ್ಧಿಸುವುದು ಇದ್ದರೆ ಸ್ಪರ್ಧಿಸಲಿ. ಆದರೆ, ವಿನಾಕಾರಣ ಬ್ಯಾಂಕ್ ವಿರುದ್ಧ ಆರೋಪಿಸುವುದು ಸರಿಯಲ್ಲ. ಆರೋಪ ಮಾಡುವವರು ಲಿಖಿತ ರೂಪದಲ್ಲಿ ದೂರು ಕೊಟ್ಟರೆ ಕ್ರಮ ಜರುಗಿಸಲಾಗುವುದು. ಈ ವಿಷಯವಾಗಿ ಬ್ಯಾಂಕಿನ ಅಧ್ಯಕ್ಷರೇ ಸ್ಪಷ್ಟನೆ ಕೊಡಬೇಕು. ಆದರೆ, ಅವರ ಅನುಪಸ್ಥಿತಿಯಲ್ಲಿ ನಾವು ಬ್ಯಾಂಕಿನ ಆಡಳಿತ ಮಂಡಳಿಯವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದೇವೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.