ADVERTISEMENT

ಬಿಲ್ಕಿಸ್‌ ಬಾನು ಪ್ರಕರಣ: ಅಪರಾಧಿಗಳ ಬಿಡುಗಡೆಗೆ ಹೊಸಪೇಟೆಯಲ್ಲಿ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 11:14 IST
Last Updated 29 ಆಗಸ್ಟ್ 2022, 11:14 IST
ಜನವಾದಿ ಮಹಿಳಾ ಸಂಘ ಹಾಗೂ ಸಾಮೂಹಿಕ ಸಂಘಟನೆಗಳ ವೇದಿಕೆಯ ಕಾರ್ಯಕರ್ತರು ಸೋಮವಾರ ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಜನವಾದಿ ಮಹಿಳಾ ಸಂಘ ಹಾಗೂ ಸಾಮೂಹಿಕ ಸಂಘಟನೆಗಳ ವೇದಿಕೆಯ ಕಾರ್ಯಕರ್ತರು ಸೋಮವಾರ ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಗುಜರಾತ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಬದುಕುಳಿದ ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳನ್ನು ಗುಜರಾತ್‌ ಸರ್ಕಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಿರುವ ಕ್ರಮ ಖಂಡನಾರ್ಹವಾಗಿದ್ದು, ಕೂಡಲೇ ಆದೇಶವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಜನವಾದಿ ಮಹಿಳಾ ಸಂಘ ಹಾಗೂ ಸಾಮೂಹಿಕ ಸಂಘಟನೆಗಳ ವೇದಿಕೆ, ರಾಜ್ಯ ಮಹಿಳಾ ಒಕ್ಕೂಟ ಸೋಮವಾರ ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

ಜನವಾದಿ ಸಂಘಟನೆಯವರು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರೆ, ರಾಜ್ಯ ಮಹಿಳಾ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರಧಾನಿ ಹಾಗೂ ರಾಷ್ಟ್ರಪತಿಯವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

ಬಿಲ್ಕಿಸ್‌ ಬಾನು ಗರ್ಭಿಣಿಯಿದ್ದಾಗ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳಿಗೆ 15 ವರ್ಷ ಶಿಕ್ಷೆಯಾಗಿತ್ತು. ಆದರೆ, ಅವಧಿಗೂ ಮುನ್ನವೇ ಅವರನ್ನು ಬಿಡುಗಡೆಗೊಳಿಸಿರುವುದು ಖಂಡನಾರ್ಹ. ಸಾಮೂಹಿಕ ಅತ್ಯಾಚಾರದಂಥ ಪ್ರಕರಣದಲ್ಲಿ ಕೇಂದ್ರದ ಒಪ್ಪಿಗೆ ಪಡೆಯದೆ ರಾಜ್ಯ ಮುಂದುವರೆಯುವಂತಿಲ್ಲ. ಆದರೆ, ಈ ವಿಷಯದಲ್ಲಿ ಉಲ್ಲಂಘನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಗುಜರಾತ್‌ ಸರ್ಕಾರಕ್ಕೆ ಛೀಮಾರಿ ಹಾಕುವ ನಿಲುವಳಿಯನ್ನು ಸಂಸತ್ತಿನಲ್ಲಿ ಮಂಡಿಸಬೇಕು. ಗುಜರಾತ್‌ ಸರ್ಕಾರದ ಕ್ರಮವನ್ನು ಮಾನ್ಯ ಮಾಡಿರುವ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಪ್ರಕರಣದ ಸಂತ್ರಸ್ತ ಮಹಿಳೆಗೆ ಸಂಪೂರ್ಣ ಸುರಕ್ಷತೆ ಒದಗಿಸಬೇಕೆಂದು ಆಗ್ರಹಿಸಿದರು.

ಜನವಾದಿ ಸಂಘಟನೆಯ ಕೆ. ನಾಗರತ್ನ, ಎ. ಕರುಣಾನಿಧಿ, ಎಂ. ಗೋಪಾಲ್‌, ಎಂ. ಜಂಬಯ್ಯ ನಾಯಕ, ಖಾಲಿದ್‌, ಸೌಭಾಗ್ಯಲಕ್ಷ್ಮಿ, ಉಮಾಮಹೇಶ್ವರ, ಎಲ್‌. ಮಂಜುನಾಥ, ಯಲ್ಲಮ್ಮ, ಯಲ್ಲಾಲಿಂಗ, ತಾಯಪ್ಪ ನಾಯಕ, ಮಹಿಳಾ ಒಕ್ಕೂಟದ ಯಶೋಧ, ಎಚ್‌. ನೀಲಮ್ಮ, ಬಿ. ಭಾಗ್ಯ, ಹುಸೇನ್‌ ರಾಜಾಭಕ್ಷಿ, ಎಂ. ಗೀತಾ, ಅಕ್ಕಮಹಾದೇವಿ, ಎಚ್‌. ಇಂದ್ರಮ್ಮ, ಎ. ಶ್ರುತಿ, ಎಂ. ಶಿಲ್ಪಾ, ಬಿ. ಯಲ್ಲಮ್ಮ, ಎ. ಪರಮೇಶ, ಎಚ್‌. ಬಸವಅರಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.