ಹೊಸಪೇಟೆ (ವಿಜಯನಗರ): ಈಚೆಗೆ ಕೊನೆಗೊಂಡ ಹಂಪಿ ಉತ್ಸವ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಬಿಜೆಪಿ ಜಿಲ್ಲಾ ಘಟಕ ಖಂಡಿಸಿದ್ದು, ಸಿಎಂ, ಡಿಸಿಎಂ ಗೈರಾಗಿದ್ದ ಕಾರ್ಯಕ್ರಮವನ್ನು ಸರ್ಕಾರ ಕಾಟಾಚಾರಕ್ಕೆ ನಡೆಸಿದಂತಿದೆ ಎಂದು ದೂರಿದೆ.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವ ರೆಡ್ಡಿ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸಹ ಉತ್ಸವವನ್ನು ಉದ್ಘಾಟಿಸಿ ಬಳಿಕ ಪತ್ತೆಯೇ ಇಲ್ಲವಾದರು. ಈ ಹಿಂದೆ ಮುತ್ಸದ್ಧಿ ರಾಜಕಾರಣಿ ಎಂ.ಪಿ.ಪ್ರಕಾಶ್ ಅವರು ಸ್ವತಃ ತಾವೇ ಮುತುವರ್ಜಿ ವಹಿಸಿ ಎಲ್ಲಾ ಪ್ರಕಾರದ ದೇಶಿ, ಕಲೆ ಸಾಹಿತ್ಯ ಸಂಸ್ಕೃತಿ, ಪರಂಪರೆಗೆ ಒತ್ತುಕೊಟ್ಟು, ವಿಜಯನಗರದ ಗತ ಇತಿಹಾಸವು ಇಂದಿನ ಪೀಳಿಗೆಗೆ ಮುಟ್ಟಿಸಲು, ಹಂಪಿ ಉತ್ಸವವನ್ನು ಒಂದು ಜನೋತ್ಸವವಾಗಿ ಬದಲಾಯಿಸಿದ್ದರು ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ಸರ್ಕಾರ ಹಂಪಿ ಉತ್ಸವವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಒಂದು ಉತ್ಸವವನ್ನು ಹೇಗೆ ಅದ್ಧೂರಿಯಾಗಿ ಮಾಡಬಹುದೆಂಬುದನ್ನು ಶ್ರೀಕೃಷ್ಣ ದೇವರಾಯರ 500ನೇ ವರ್ಷದ ಪಟ್ಟಾಭಿಷೇಕದ ಸ್ಮರಣೆಗಾಗಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸರ್ಕಾರ ತೋರಿಸಿಕೊಟ್ಟಿದೆ. ಮೖಸೂರು ದಸರಾಕ್ಕೆ ನೀಡುವ ಪ್ರಾಮುಖ್ಯತೆ ನಮ್ಮ ಹಂಪಿ ಉತ್ಸವಕ್ಕೆ ನೀಡದಿರುವುದು ದುರದೃಷ್ಟಕರ, ಈ ಮೂಲಕ ಉತ್ತರ ಕರ್ನಾಟಕಕ್ಕೆ ಈ ಸರ್ಕಾರ ಮಲತಾಯಿ ಧೋರಣೆ ತೋರಿದೆ. ಜಿಲ್ಲಾಧಿಕಾರಿ ಅವರು ಎಲ್ಲಾ ಹಂತದ ಅಧಿಕಾರಿ ವರ್ಗದಿಂದ ಹಂಪಿ ಉತ್ಸವವನ್ನು ಉತ್ತಮ ರೀತಿಯಲ್ಲಿ ನಡೆಸಿರುವುದಷ್ಟೇ ಸಮಾಧಾನಕರ ಸಂಗತಿ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.