ADVERTISEMENT

ಹೊಸಪೇಟೆ ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಖಚಿತ: ಸಚಿವ ಆನಂದ್ ಸಿಂಗ್ ಭರವಸೆ

ರಾಹು ಕಾಲದ ನಂತರ ಮತಗಟ್ಟೆಗೆ ಬಂದು ಮತ ಹಾಕಿದ ಆನಂದ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 13:50 IST
Last Updated 27 ಡಿಸೆಂಬರ್ 2021, 13:50 IST
ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರು ಸೋಮವಾರ ಹೊಸಪೇಟೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿದ್ದ 19ನೇ ಮತಗಟ್ಟೆಗೆ ಕುಟುಂಬ ಸದಸ್ಯರೊಂದಿಗೆ ಬಂದು ಮತ ಚಲಾಯಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರು ಸೋಮವಾರ ಹೊಸಪೇಟೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿದ್ದ 19ನೇ ಮತಗಟ್ಟೆಗೆ ಕುಟುಂಬ ಸದಸ್ಯರೊಂದಿಗೆ ಬಂದು ಮತ ಚಲಾಯಿಸಿದರು   

ಹೊಸಪೇಟೆ (ವಿಜಯನಗರ): ‘ನಗರಸಭೆ ಚುನಾವಣೆಯಲ್ಲಿ ಜಯ ಗಳಿಸಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಭರವಸೆ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಬಾಲಕಿಯರ ಕಾಲೇಜಿನ 19ನೇ ಮತಗಟ್ಟೆಯಲ್ಲಿ ಸೋಮವಾರ ಕುಟುಂಬ ಸದಸ್ಯರೊಂದಿಗೆ ಬಂದು ಹಕ್ಕು ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈ ಹಿಂದೆ ನನಗೆ ಅನುಭವ ಇರಲಿಲ್ಲ. ಚುನಾವಣೆಯಲ್ಲಿ ಹೆಚ್ಚು ತೊಡಿಸಿಕೊಳ್ಳಲು ಆಗಿರಲಿಲ್ಲ. ಈಗ ಸಚಿವನಾಗಿರುವುದರಿಂದ ಜವಾಬ್ದಾರಿ ಹೆಚ್ಚಿದೆ. ಪಕ್ಷದ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಈ ಸಲ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮಿಸಿದ್ದೇವೆ. ಹೆಚ್ಚಿನ ವಾರ್ಡ್ ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ. ನಮ್ಮ ಪಕ್ಷದವರೇ ಅಧ್ಯಕ್ಷರಾಗುವುದು ಖಚಿತ’ ಎಂದು ಹೇಳಿದರು.

ADVERTISEMENT

‘ಬೆಳಿಗ್ಗೆ ಒಂಬತ್ತು ಗಂಟೆಯವರೆಗೆ ರಾಹುಕಾಲ ಇತ್ತು. ಅದು ಮುಗಿದ ನಂತರ ಮತ ಚಲಾವಣೆಗೆ ಬಂದಿರುವೆ. ಪ್ರತಿ ಸಲ ನಮ್ಮ ತಂದೆ ಬೆಳಿಗ್ಗೆಯೇ ನಮ್ಮನ್ನು ಕರೆದುಕೊಂಡು ಬರುತ್ತಿದ್ದರು. ಅವರೀಗ ಇಲ್ಲದೆ ಇರುವುದರಿಂದ ಬೇಸರವಾಗಿದೆ’ ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಅವರನ್ನೇಕೇ ಬದಲಿಸಬೇಕು? ಆರ್ಥಿಕ ಸಂಕಷ್ಟದಲ್ಲಿಯೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಕೆಲವು ಕಡೆ ಹಿನ್ನಡೆ ಆಗಿರಬಹುದು. ಅದು ಪಕ್ಷಕ್ಕೆ ಎಚ್ಚರಿಕೆಯ ಗಂಟೆ. 2023ರಲ್ಲಿ ನಡೆಯಲಿರುವ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಂಡು ಮತ್ತೊಮ್ಮೆ ಗೆಲ್ಲುತ್ತೇವೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಶಿಶು ಮರಣ ಸಂಖ್ಯೆ ಹೆಚ್ಚಾಗಿರುವುದರ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅದನ್ನು ತಪ್ಪಿಸಲು ಅಗತ್ಯ ಕ್ರಮ ಜರುಗಿಸಲಾಗುವುದು’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಆನಂದ್‌ ಸಿಂಗ್‌ ಅವರ ಪತ್ನಿ ಲಕ್ಷ್ಮಿ ಸಿಂಗ್‌, ಮಗ ಸಿದ್ದಾರ್ಥ ಸಿಂಗ್‌, ಮಗಳು ವೈಷ್ಣವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.