ADVERTISEMENT

ಸರ್ಕಾರದ ನಿಷ್ಕ್ರಿಯತೆಯ ಲಾಭ ಪಡೆಯಲೇಬೇಕು:BJP ಕಾರ್ಯಕರ್ತರಿಗೆ ಶ್ರೀರಾಮುಲು ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 6:29 IST
Last Updated 7 ಡಿಸೆಂಬರ್ 2025, 6:29 IST
<div class="paragraphs"><p>ಹೊಸಪೇಟೆಯಲ್ಲಿ ಶನಿವಾರ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಕಾರ್ಯಾಗಾರವನ್ನು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಮಾಜಿ ಸಚಿವ ಬಿ.ಶ್ರೀರಾಮುಲು ಉದ್ಘಾಟಿಸಿದರು&nbsp;</p></div>

ಹೊಸಪೇಟೆಯಲ್ಲಿ ಶನಿವಾರ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಕಾರ್ಯಾಗಾರವನ್ನು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಮಾಜಿ ಸಚಿವ ಬಿ.ಶ್ರೀರಾಮುಲು ಉದ್ಘಾಟಿಸಿದರು 

   

–ಪ್ರಜಾವಾಣಿ ಚಿತ್ರ

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗೆ ಬಿಜೆಪಿಯ ವಿರೋಧವಿಲ್ಲ, ನಿಜವಾದ ಬಡವರಿಗೆ ಅದು ತಲುಪಬೇಕು ಎಂಬುದು ಪಕ್ಷದ ನಿಲುವು. ಗ್ಯಾರಂಟಿ ಹೆಸರಲ್ಲಿ ಬೆಲೆ ಏರಿಕೆ ಮಾಡಿರುವ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ, ಇದರ ಲಾಭವನ್ನು ಬಿಜೆಪಿ ಮುಂದೆ ಪಡೆಯಲೇಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ADVERTISEMENT

ಇಲ್ಲಿ ಶನಿವಾರ ಮಂಡಲ ಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಬೂತ್‌ ಮಟ್ಟದ ಕಾರ್ಯಕರ್ತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಗರಣಗಳಿಂದ ತುಂಬಿ ಹೋಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ, ರೈತರ ಕಷ್ಟಕ್ಕೆ ಕಿವಿಗೊಡುತ್ತಲೇ ಇಲ್ಲ, ಇದೀಗ ಕುರ್ಚಿ ಕಾಳಗ ಜೋರಾಗಿದೆ. ಜನ ಈಗ ರೋಸಿ ಹೋಗಿದ್ದಾರೆ, ಮುಂದೆ ಬಿಜೆಪಿ ಸರ್ಕಾರ ಬರುವುದು ನಿಶ್ಚಿತವಾಗಿದ್ದು, ಜನರಿಗೆ ಈ ಸರ್ಕಾರದ ಕಾರ್ಯವೈಖರಿಯನ್ನು ಮನವರಿಕೆ ಮಾಡುವ ಕೆಲಸ ಆಗಬೇಕು ಎಂದರು.

‘ಚುನಾವಣೆಯಲ್ಲಿ ನಾನು ಸೋತಿರಬಹುದು, ಆದರೆ ಜನರ ಹೃದಯದಲ್ಲಿ ನಾನು ಈಗಲೂ ಇದ್ದೇನೆ. ವಿಜಯನಗರ ಕ್ಷೇತ್ರ ಸಹಿತ ಈ ಜಿಲ್ಲೆಯ ಮತದಾರರು ನನ್ನ ಮೇಲೆ ಬಹಳಷ್ಟು ಪ್ರೀತಿ ತೋರಿಸಿದ್ದಾರೆ. ಆನಂದ್ ಸಿಂಗ್ ಅವರು ಹೊಸಪೇಟೆ ಮತ್ತು ವಿಜಯನಗರ ಕ್ಷೇತ್ರದ ಅಭಿವೃದ್ಧಿಗೆ ಮಾಡಿರುವ ಕೆಲಸವೇ ಬಿಜೆಪಿಗೆ ಈ ಭಾಗದಲ್ಲಿರುವ ಶಕ್ತಿ. ಹಾಲಿ ಶಾಸಕರ ನಿಷ್ಕ್ರಿಯತೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡುವ ಹೊಣೆಗಾರಿಕೆ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರಿಗೆ ಇದೆ’ ಎಂದು ಹೇಳಿದರು.

ಹಗರಣಗಳ ಸರಮಾಲೆ: ವಾಲ್ಮೀಕಿ ನಿಗಮದ ₹187 ಕೋಟಿ ಲಪಟಾಯಿಸಿದ ಹಗರಣ ಈ ಭಾಗದ ಮತದಾರರಿಗೆ ಮಾತ್ರವಲ್ಲ, ಎಸ್‌ಟಿ ಸಮುದಾಯಕ್ಕೆ ಮಾಡಿದಂತಹ  ಮಹಾ ಮೋಸ. ವಕ್ಫ್‌ ಹೆಸರಲ್ಲಿ ಆಸ್ತಿ ಕಬಳಿಸುವ  ಪ್ರಯತ್ನ ಸಹ ಬಿಜೆಪಿ ಹೋರಾಟದದಿಂದಲೇ ನಿಂತಿತು. ರೈತರ ಗೋಳಿಗಂತೂ ಈ ಸರ್ಕಾರದಲ್ಲಿ ಸ್ಪಂದನವೇ ಇಲ್ಲ, ಗ್ಯಾರಂಟಿ ನೀಡಿದ್ದಕ್ಕಿಂತ ದೊಡ್ಡ ಹಗರಣಗಳಲ್ಲಿ ಹಾಗೂ ಕಮಿಷನ್ ದಂಧೆಯಲ್ಲಿ ತೊಡಗಿರುವ ಕಾರಣ ಜನರಿಗೆ ಈ ಸರ್ಕಾರದ ಮೇಲೆ ಭ್ರಮನಿರಸನ ಈಗಾಗಲೇ ಉಂಟಾಗಿದೆ ಎಂದು ಶ್ರೀರಾಮುಲು ಹೇಳಿದರು.

ಪಕ್ಷದ ಜಿಲ್ಲಾ ಘಟಕದ  ಅಧ್ಯಕ್ಷ ಸಂಜೀವ ರೆಡ್ಡಿ, ಮಾಜಿ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್‌, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಂದೀಪ್  ಸಿಂಗ್‌, ಮಂಡಲ ಅಧ್ಯಕ್ಷ ಶಂಕರ್ ಮೇಟಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಎನ್‌.ರೂಪೇಶ್ ಕುಮಾರ್‌, ಜಿಲ್ಲಾ ವಕ್ತಾರ ಅಶೋಕ್ ಜೀರೆ, ಜಿಲ್ಲಾ ಉಪಾಧ್ಯಕ್ಷ ಬಲ್ಲಾಹುಣ್ಸಿ ರಾಮಣ್ಣ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ, ನಗರಸಭೆ ಸದಸ್ಯರು ಇತರರು ಇದ್ದರು.

ವಿಜಯೇಂದ್ರ ಅವರ ನಾಯಕತ್ವದಲ್ಲಿ ಎಲ್ಲರಿಗೂ ವಿಶ್ವಾಸವಿದೆ ಪಕ್ಷದ ಕೆಲವರು ಅವರ ವಿರುದ್ಧ ಹೇಳಿಕೆ ನೀಡಿದರೆ ಏನೂ ಪರಿಣಾಮ ಉಂಟಾಗದು. ಹಿಂದುತ್ವವೇ ನಮಗೆಲ್ಲ ಮೂಲ ಹೀಗಾಗಿ ಮುಂದೆ ಎಲ್ಲರೂ ಒಗ್ಗೂಡುವುದು ನಿಶ್ಚಿತ
ಬಿ.ಶ್ರೀರಾಮುಲು ಮಾಜಿ ಸಚಿವ

‘ಸೋಲಿನಿಂದ ಪ್ರಭಾವ ಕುಂಠಿತ’

‘ಬಸನಗೌಡ ಪಾಟೀಲ್ ಯತ್ನಾಳ ಜತೆಗೆ ನನಗೆ ಉತ್ತಮ ಬಾಂಧವ್ಯ ಇರುವುದು ನಿಜ ಆದರೆ ಅವರು ಈಗ ಪಕ್ಷದಿಂದ ಉಚ್ಚಾಟಿತಗೊಂಡವರು. ಅವರೊಂದಿಗೆ ಸಂಧಾನ ನಡೆಸಲು ಪಕ್ಷದ ವರಿಷ್ಠರು ನನಗೆ ತಿಳಿಸುತ್ತಾರೆ ಎಂಬ ನಂಬಿಕೆ ಇಲ್ಲ ನಾನು ಚುನಾವಣೆಯಲ್ಲಿ ಸೋತ ಕಾರಣ ವರಿಷ್ಠರ ಮಟ್ಟದಲ್ಲಿ ನನ್ನ ಪ್ರಭಾವವೂ ಕುಂಠಿತವಾಗಿದೆ’ ಎಂದು ಶ್ರೀರಾಮುಲು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.