ADVERTISEMENT

ಹಗರಿಬೊಮ್ಮನಹಳ್ಳಿ | ಪ್ರಯಾಣಿಕರಿಗೆ ರಸ್ತೆಯೇ ತಂಗುದಾಣ

₹15 ಲಕ್ಷ ವೆಚ್ಚವಾದರೂ ಬಳಕೆಯಾಗದ ಬಸ್ ನಿಲ್ದಾಣ

ಸಿ.ಶಿವಾನಂದ
Published 11 ಅಕ್ಟೋಬರ್ 2025, 3:10 IST
Last Updated 11 ಅಕ್ಟೋಬರ್ 2025, 3:10 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಪನಾಯಕನಹಳ್ಳಿ ಗ್ರಾಮದಲ್ಲಿ ಶಿಥಿಲಗೊಂಡಿರುವ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ವಿದ್ಯಾರ್ಥಿ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಪನಾಯಕನಹಳ್ಳಿ ಗ್ರಾಮದಲ್ಲಿ ಶಿಥಿಲಗೊಂಡಿರುವ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ವಿದ್ಯಾರ್ಥಿ   

ಹಗರಿಬೊಮ್ಮನಹಳ್ಳಿ: ಅಂಕಸಮುದ್ರ ಪಕ್ಷಿಧಾಮ ಸಮೀಪದ, ಇನ್ನೂ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ತಾಲ್ಲೂಕಿನ ಉಪನಾಯಕನಹಳ್ಳಿ ಗ್ರಾಮದಲ್ಲಿ ₹15 ಲಕ್ಷ ವೆಚ್ಚ ಮಾಡಿ ನಿರ್ಮಿಸಿದ ಬಸ್ ನಿಲ್ದಾಣ ಯಾರಿಗೂ ಉಪಯೋಗವಾಗದೆ ಖಾಸಗಿ ವಾಹನ ನಿಲುಗಡೆ ತಾಣವಾಗಿಬಿಟ್ಟಿದೆ.

ಪಕ್ಷಿಧಾಮಕ್ಕೆ ಬಂದವರು, ಇತರ ಪ್ರಯಾಣಿಕರು ಇರಲಿ, ರಸ್ತೆ ಪಕ್ಕದಲ್ಲಿ ನಿಲ್ಲುವುದು ತಪ್ಪಿಯೇ ಇಲ್ಲ. ಕೆಕೆಆರ್‌ಡಿಬಿ ಯೋಜನೆಯಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ನಿರ್ಮಾಣಗೊಂಡ ಈ ಬಸ್‌ ನಿಲ್ದಾಣದ ಶೇ 75ರಷ್ಟು ಟೆಂಡರ್ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ.

ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿರುವ ಗ್ರಾಮದಲ್ಲಿ ಬಹುತೇಕ ಎಲ್ಲ ವೇಗದೂ‌ತ ಬಸ್‍ಗಳು ನಿಲುಗಡೆಯಾಗುತ್ತವೆ. ಹಂಪಾಪಟ್ಟಣ, ನಕರಾಳತಾಂಡಾ, ಅಂಕಸಮುದ್ರ ಹಾಗೂ ಪಕ್ಷಿಧಾಮ, ಅಡವಿ ಆನಂದೇವನಹಳ್ಳಿ, ಬಾಚಿಗೊಂಡನಹಳ್ಳಿ, ಹಗರಿ ಕ್ಯಾದಿಗಿಹಳ್ಳಿ ಸೇರಿದಂತೆ ಈ ಭಾಗದ ಗ್ರಾಮಗಳ ಪ್ರಯಾಣಿಕರು ಇಲ್ಲಿಂದಲೇ ಬಸ್ ಸಂಪರ್ಕದ ಮೂಲಕ ದೂರದ ಊರುಗಳಿಗೆ ತೆರಳುತ್ತಾರೆ, ಬಹು ಸಂಖ್ಯೆಯಲ್ಲಿ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಹೊಸಪೇಟೆ ಮತ್ತು ಪಟ್ಟಣದ ಕಾಲೇಜ್‍ಗಳಿಗೆ ಹೋಗುತ್ತಾರೆ. ಇಲ್ಲಿಂದ ಪ್ರಯಾಣಿಸುವವರೆಲ್ಲ ರಸ್ತೆ ಪಕ್ಕದಲ್ಲಿ ನಿಂತು ಬಸ್‍ಗಳಿಗೆ ಕಾಯಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಮಳೆ ಬಂದರಂತೂ ಹೋಟೆಲ್ ಬಳಿ, ಮರಗಳ ಕೆಳಗೆ ಆಶ್ರಯ ಪಡೆಯಬೇಕು.

ADVERTISEMENT

ಗ್ರಾಮದಲ್ಲಿ ಪ್ರಯಾಣಿಕರಿಗೆ ಕೊಂಚ ದೂರ ಎನ್ನಿಸುವ ಸ್ಥಳದಲ್ಲಿ ಹೊಸ ಬಸ್‍ನಿಲ್ದಾಣ ನಿರ್ಮಿಸಲಾಗಿದೆ, ರಸ್ತೆಯಿಂದ ಒಳಗೆ ಇರುವುದರಿಂದ ಬಸ್ ನಿಲುಗಡೆಗೆ ಸೂಕ್ತವಾಗಿಲ್ಲ ಎನ್ನುವುದು ಅನೇಕರ ಅಭಿಪ್ರಾಯವೂ ಆಗಿದೆ. ಗ್ರಾಮ ಪಂಚಾಯಿತಿಯಿಂದ ರಸ್ತೆಗೆ ಹೊಂದಿಕೊಂಡು ಕಿರು ಸೇತುವೆ ನಿರ್ಮಿಸಿದರೂ ಅಗತ್ಯವಾದ ಸ್ಥಳಾವಕಾಶ ಇಲ್ಲದೆ ಬಸ್‍ಗಳು ಆ ಭಾಗಕ್ಕೆ ತೆರಳುವುದಕ್ಕೆ ಸಾಧ್ಯವಾಗುತ್ತಿಲ್ಲ.

ಹಳೆಯ ಬಸ್‌ನಿಲ್ದಾಣವನ್ನು ನೆಲಸಮಗೊಳಿಸಿ ಅಲ್ಲಿಯೇ ನಿರ್ಮಿಸಿದ್ದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು, ಆದರೆ ಇಲಾಖೆ ಈ ಕುರಿತಂತೆ ತಪ್ಪು ನಿರ್ಧಾರ ಕೈಗೊಂಡಿದೆ ಎನ್ನುತ್ತಾರೆ ಹಂಪಾಪಟ್ಟಣದ ಪ್ರವೀಣ್‍ಕುಮಾರ್.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಪನಾಯಕನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ನಿಲುಗಡೆಯಾಗಿದ್ದವು
ಉಪನಾಯಕನಹಳ್ಳಿ ಗ್ರಾಮದಲ್ಲಿ ರಸ್ತೆ ಪಕ್ಕದಲ್ಲಿ ಬಸ್‍ಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರು
ಬಸ್ ನಿಲ್ದಾಣ ಎಲ್ಲ ಪ್ರಯಾಣಿಕರಿಗೂ ಉಪಯೋಗವಾಗಬೇಕು. ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆದು ಶೀಘ್ರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವೆ
ಡಿ.ಶಿವಾನಂದ ಗ್ರಾಮದ ಮುಖಂಡ
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಖಾಸಗಿ ವಾಹನಗಳನ್ನು ತೆರವುಗೊಳಿಸಿ ಶೀಘ್ರದಲ್ಲಿ ನಿಲ್ದಾಣ ಉದ್ಘಾಟಿಸಲಾಗುವುದು
ಮಲ್ಲಿಕಾರ್ಜುನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಹಗರಿಬೊಮ್ಮನಹಳ್ಳಿ

ಖಾಸಗಿ ವಾಹನಗಳ ನಿಲುಗಡೆ ಪ್ರಯಾಣಿಕರ ಅಗತ್ಯ ಈಡೇರದ ಕಾರಣ ಯಾರಿಗೂ ಉಪಯೋಗವಾದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಈ ಬಸ್‌ ನಿಲ್ದಾಣ ಈಗ ಖಾಸಗಿ ವಾಹನಗಳಿಗೆ ಅನೂಕೂಲ ಕಲ್ಪಿಸಿದೆ. ಖಾಸಗಿ ಶಾಲೆಯ ಬಸ್ ಮತ್ತು ಇತರೆ ವಾಹನಗಳಿಗೆ ಇದು ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.