ADVERTISEMENT

ಜಾತಿಗಣತಿ ಬುಡಮೇಲು ಯತ್ನ: ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ.ವೇಣುಗೋಪಾಲ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 12:30 IST
Last Updated 20 ಸೆಪ್ಟೆಂಬರ್ 2025, 12:30 IST
   

ಹೊಸಪೇಟೆ: ಜಾತಿಗಣತಿ ಅತಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಮತ್ತು ಇತರ ಸೌಲಭ್ಯಗಳಿಗೆ ಬಹಳ ಮುಖ್ಯ, ಆದರೆ ಇದನ್ನು ಮತ್ತೊಮ್ಮೆ ಬುಡಮೇಲುಗೊಳಿಸುವ ಯತ್ನ ನಡೆಯುತ್ತಿದೆ, ಇದಕ್ಕೆ ಅವಕಾಶ ನೀಡಬಾರದು ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷರೂ ಆಗಿರುವ ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ.ವೇಣುಗೋಪಾಲ್‌ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ಹಿಂದುಳಿದ ಜಾತಿ, ಸಮುದಾಯಗಳು ಜಾತಿ ಸಮೀಕ್ಷೆ ವೇಳೆ ಮೂಲ ಸಮುದಾಯದ ಹೆಸರನ್ನು ಮಾತ್ರ ಬಳಸಬೇಕು, ಒಳಪಂಡಗಡ ಬರೆಸಬಾರದು, ಇದರಿಂದ ಮೀಸಲಾತಿಗೆ ಹಿನ್ನಡೆ ಆಗುತ್ತದೆ ಎಂದರು.

‘ಜಾತಿ ಗೊಂದಲಗಳು ಏನೇ ಇದ್ದರೂ ಅದಕ್ಕೆ ಈಗಲೇ ಆಕ್ಷೇಪ ಎತ್ತುವುದು ಸರಿಯಲ್ಲ, ಸಮೀಕ್ಷೆ ನಡೆದ ಬಳಿಕವೂ ಗೊಂದಲ ನಿವಾರಿಸಿಕೊಳ್ಳುವುದು ಸಾಧ್ಯವಿದೆ. ಮೊದಲಿಗೆ ಜಾತಿಗಳ ಸಮೀಕ್ಷೆ ನಡೆಯಲಿ, ಜಾತಿ, ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿದರೆ ಯೋಜನೆ ರೂಪಿಸುವುದು ಸುಲಭ. ಒಬ್ಬೊಬ್ಬ ಗಣತಿದಾರರಿಗೆ 130ರಷ್ಟು  ಮನೆಗಳಲ್ಲಿ ಸಮೀಕ್ಷೆ ನಡೆಸಬೇಕಿದೆ. ಆಗ ಸೂಕ್ತ ಮಾಹಿತಿ ನೀಡಿ ಸಮೀಕ್ಷೆ ಯಶಸ್ವಿಯಾಗುವಂತೆ ಮಾಡಬೇಕು. ಕೆಲವು ಸ್ಥಾಪಿತ ಹಿತಾಸಕ್ತಿಗಳು ಸಮೀಕ್ಷೆಗೆ ಅಡ್ಡಿಪಡಿಸುವ ಯತ್ನಕ್ಕೆ ಸರ್ಕಾರ ದಿಟ್ಟ ಪ್ರತ್ಯುತ್ತರ ನೀಡುತ್ತದೆ ಎಂಬ ವಿಶ್ವಾಸ ಇದೆ’ ಎಂದರು.

ADVERTISEMENT

ಶೇ 4ರಷ್ಟು ಮೀಸಲಾತಿ ಅಗತ್ಯ: ರಾಜ್ಯದಲ್ಲಿ ಅತ್ಯಂತ ಹಿಂದುಳಿದ 197 ಜಾತಿಗಳಿದ್ದು, ಅವುಗಳಿಗೆ ಧ್ವನಿ ಸಿಗಬೇಕಿದೆ. ಶೇ 4ರಷ್ಟು ಮೀಸಲಾತಿ ಈ ಸಮುದಾಯಗಳಿಗೆ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು.

ಸಿಎಂ ಇಳಿಯಲ್ಲ: ಬಳಿಕ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಂವಾದ ಸಭೆಯಲ್ಲಿ ವೇಣುಗೋಪಾಲ್ ಜತೆಯಲ್ಲಿ ಪಾಲ್ಗೊಂಡ ಶಾಸಕ ಎಚ್‌.ಆರ್.ಗವಿಯಪ್ಪ ಮಾತನಾಡಿ, ‘ಜಾತಿಗಣತಿಯನ್ನು ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿ ಮುಗಿಸುತ್ತಾರೆ, ಅದು ಪೂರ್ಣಗೊಳ್ಳದೆ ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.