ADVERTISEMENT

ಹಂಪಿ ಉತ್ಸವ: ಪಂಪಾ ಕರ್ನಾಟಕ ವಸ್ತ್ರ ವೈಭವ ಪ್ರದರ್ಶನ

ಹಂಪಿ ಉತ್ಸವದಲ್ಲಿ ಗಮನ ಸೆಳೆದ ಪಾರಂಪರಿಕ ವಸ್ತ್ರಗಳು

ವಿಶ್ವನಾಥ ಡಿ.
Published 3 ಮಾರ್ಚ್ 2025, 5:19 IST
Last Updated 3 ಮಾರ್ಚ್ 2025, 5:19 IST
ಹಂಪಿಯ ಎದುರು ಬಸವಣ್ಣ ವೇದಿಕೆಯ ಪಕ್ಕದ ಕಟ್ಟಡದಲ್ಲಿ ವಸ್ತ್ರ ಭಂಡಾರ ಪ್ರದರ್ಶನ ವೀಕ್ಷಿಸಲು ಬಂದಿದ್ದ ಜನರು
ಹಂಪಿಯ ಎದುರು ಬಸವಣ್ಣ ವೇದಿಕೆಯ ಪಕ್ಕದ ಕಟ್ಟಡದಲ್ಲಿ ವಸ್ತ್ರ ಭಂಡಾರ ಪ್ರದರ್ಶನ ವೀಕ್ಷಿಸಲು ಬಂದಿದ್ದ ಜನರು    

ಹಂಪಿ (ವಿಜಯನಗರ): 150 ವರ್ಷಗಳ ಹಿಂದಿನ ಸೀರೆ ಹೇಗಿತ್ತು, 40 ವರ್ಷದ ಹಿಂದಿನ ಕುಬುಸ, ರವಿಕೆ, ಶೆಲ್ಯಾ, ಕಸೂತಿ ಕಲೆಯಲ್ಲಿ ರಚಿತ ವಸ್ತ್ರಗಳ ಪಂಪಾ ಕರ್ನಾಟಕ ವಸ್ತ್ರ ವೈಭವ ಪ್ರದರ್ಶನ ಹಂಪಿಯ ಎದುರು ಬಸವಣ್ಣ ವೇದಿಕೆ ಬಳಿ ಅನಾವರಗೊಂಡಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ಕರ್ನಾಟಕ ಜವಳಿ ಇಲಾಖೆ, ಅಭಿರಾಜ್ ಬಲ್ಡೋಟಾ ಪ್ರತಿಷ್ಠಾನ ಸಹಯೋಗದಲ್ಲಿ ಪಂಪಾ ಕರ್ನಾಟಕ ವಸ್ತ್ರ ವೈಭವ ಉಚಿತ ಪ್ರದರ್ಶನ ಏರ್ಪಡಿಸಿದ್ದು, ಸಾವಿರಾರು ಜನ ಬಂದು ವೀಕ್ಷಿಸಿ, ಪಾರಂಪರಿಕ ವಸ್ತ್ರಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಹತ್ತಿ, ರೇಷ್ಮೆ, ಉಣ್ಣೆ, ಬಾಳೆ ಗಿಡಅಂತರ ಗಂಗೆ (ವಾಟರ್ ಹಯಸಿಂತ್)ನಿಂದ ಪಡೆದ ನಾರುಗಳನ್ನು ಬಳಸಿ ತೆಗೆದ ದಾರದಿಂದ ತಯಾರಿಸಿದ ಸೀರೆಗಳು, ವಸ್ತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ADVERTISEMENT

ಕೈ ಕುಸುರಿ, ನೂಲುವಿಕೆ, ಕಸೂತಿ, ನೇಯ್ಗೆ, ಜರಿಕಲೆ, ಕೌದಿ ಕಲೆಗಳಿಂದ ಮಾಡಿದ, ನೂಲಿನಿಂದ ತಯಾರಿಸಿದ ನಮ್ಮ ರಾಜ್ಯದ ಮೊಳಕಾಲ್ಮೂರು, ಇಳಕಲ್, ಹುಬ್ಬಳ್ಳಿ, ಬಳ್ಳಾರಿಯ ಪ್ರಸಿದ್ದ ಸೀರೆ, ಶೆಲ್ಯೆ, ಪಂಜೆ, ಟವಲ್‌ಗಳು ಹಸ್ತ ಚಿತ್ರಕಲೆಯ ಪಾರಂಪರಿಕ ಮತ್ತು ಸಮಕಾಲೀನತೆಯನ್ನು ವಸ್ತ್ರ ಭಂಡಾರ ಪ್ರತಿಬಿಂಬಿಸುತ್ತದೆ.

ರಾಜ್ಯದಲ್ಲಿ ಮಹತ್ವ ಪಡೆದಿರುವ ಇಳಕಲ್ ಸೀರೆ, ಖಣ್ (ಕುಬುಸ), ನೇಯ್ಗೆ, ಸಮಕಾಲೀನ ವಂಕಿ ತಂತ್ರದ ಮೂಲಕ ಜೋಡಿಸಿರುವುದು ಗಮನ ಸೆಳೆಯುತ್ತದೆ. ಜವಳಿ ಸಸ್ಯಗಳ ಬೀಜ ಉತ್ಪಾದನೆ, ಕೃಷಿ ಪದ್ಧತಿಗಳ ನಾವೀನ್ಯತೆ, ಮಹಾತ್ಮ ಗಾಂಧೀಜಿ ಅವರ ಖಾದಿಯ ಬಗ್ಗೆಯು ಇಲ್ಲಿ ಪರಿಚಯಿಸಲಾಗಿದೆ.

ಹತ್ತಿ ಕೈಮಗ್ಗದಿಂದ ಹೆಸರುಗಳಿಸಿದ್ದ ಪಟ್ಟೇದ ಮತ್ತು ಚಿಕ್ಕಣ್ಣ ಅಂಕ, ಸೂಡಕಡ್ಡಿ, ಕೊಡಗಿನವರು ಧರಿಸುವ ಸಾದಾ ಪಟ್ಟ, ಸೀರೆಯಂಚಿನ ವಿನ್ಯಾಸಕ್ಕೆ ಬಳಸುವ ಗೋಮಿ ತೇನಿ, ರುದ್ರಾಕ್ಷಿ, ಆನೆ ಕಣ್ಣು, ಗಂಗಾ-ಜಮುನಿ ಪ್ರತಿನಿಧಿಸುವ ಆನೆಕಲ್ಲು, ಲಕ್ಕುಂಡಿ, ಉಡುಪಿ, ಹುಬ್ಬಳ್ಳಿ, ಕುಕ್ಮಾಪುರ, ಕೋಡಿಯಾಲ, ಧಾರವಾಡದ ಪ್ರಸಿದ್ಧ ಸೀರೆಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಬಾಗಲಕೋಟೆ, ವಿಜಯಪುರದ ಗವಂತಿ, ಮುರ್ಗಿ, ನೇಗಿ ಮತ್ತು ಮೆಂಥಿ ಪ್ರಕಾರದ ಸೀರೆಗಳಿವೆ. ಸಂಡೂರಿನ ಬಂಜಾರ ಕುಶಾಲ ಕಲಾ ಕೇಂದ್ರ ನಿರ್ಮಿಸಿದ ಟೆಂಟ್ ಕೌದಿಯು ಬೆಳಿಗ್ಗೆ, ಹಗಲು, ರಾತ್ರಿ ಬಿಂಬಿಸುವ ಜಾಮಿತಿ ಮಾದರಿಯು ಪ್ರದರ್ಶನದ ಆಕರ್ಷಣೆಯಾಗಿದೆ.

‘ಪಂಪಾ ಕ್ಷೇತ್ರ ರಾಜರ ಕಾಲದಲ್ಲಿ ಪಾರಂಪರಿಕ ಮಹತ್ವ ಪಡೆದಿದೆ. ಪಂಪಾ ನಾಮಧೇಯವು ದೈವಿಕ ಸ್ತ್ರೀತ್ವವನ್ನು ಪ್ರತಿನಿಧಿಸುತ್ತದೆ. ನಮ್ಮ ರಾಜ್ಯದ ಸ್ಥಳೀಯ ನೇಯ್ಗೆ, ಪದ್ದತಿಗಳು, ಕರಕುಶಲ ವಸ್ತುಗಳು, ಕಲೆಯಲ್ಲಿ ಪ್ರತಿಫಲಿಸುತ್ತವೆ. ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಷ್ಟೆ ನಮ್ಮ ಸಂಸ್ಥೆಯ ಕೆಲಸ. ಖರೀದಿಸುವ ಆಸಕ್ತರಿಗೆ ನೇಯ್ಗೆ ಮಾಡುವ ಸಂಸ್ಥೆ ಅಥವಾ ವ್ಯಕ್ತಿಗಳನ್ನು ಸಂಪರ್ಕಿಸಲು ಅನುಕೂಲ ಮಾಡಿಕೊಡುತ್ತೇವೆ’ ಎನ್ನುತ್ತಾರೆ ಆಯೋಜಕರು. ಇದರ ನಿರ್ವಹಣೆಗೆ ಸಂಸ್ಥೆ 10ಕ್ಕೂ ಹೆಚ್ಚು ಸ್ವಯಂಸೇವಕರನ್ನು ನಿಯೋಜಿಸಿದೆ.

ಪ್ರತಿಷ್ಠಾನದ ಉಸ್ತುವಾರಿ ಲವಿನಾ ಬಲ್ಡೋಟಾ ಚಾಲನೆ ನೀಡಿದ್ದರು. ಸಂಸ್ಥೆಯ ಕರಿಷ್ಮಾ ಸ್ಟಾನಿ, ನೂಪುರ್‌ ಸಕ್ಸೇನಾ ಇದ್ದರು.

ಹಳೆ ಸೀರೆಯ ತದ್ರೂಪು ಸೃಷ್ಟಿ

150 ವರ್ಷಗಳ ಹಿಂದೆ ತಯಾರಿಸಿದ್ದ ಸೀರೆಯೊಂದನ್ನು ಪ್ರತಿಷ್ಠಾನ ಮೊಳಕಾಲ್ಮೂರಿನಲ್ಲಿ ಸಂಗ್ರಹಿಸಿ ಅದರ ಬಗ್ಗೆ ಒಂದು ತಿಂಗಳು ಅಧ್ಯಯನ ನಡೆಸಿ ಅದರಂತೆ ಮತ್ತೊಂದು ಸೀರೆ ತಯಾರಿಸಿದ್ದಾರೆ. ಹಳೆಯ ಸೀರೆ ಗಾಜಿನ ಪೆಟ್ಟಿಗೆಯಲ್ಲಿ ಭದ್ರವಾಗಿರಿಸಿದ್ದಾರೆ. ಇಲ್ಲಿನ ಸೀರೆಗಳಲ್ಲಿ ಗಂಡಭೇರುಂಡ ಸೀರೆಯಲ್ಲಿ ಅರಳಿದ ಚಿತ್ತಾರ ಬಳಕೆಯಾದ ನಾರು ದಾರದ ಬಗ್ಗೆಯು ಸಂಶೋಧನೆ ವರದಿ ಸಿದ್ದಪಡಿಸಿಟ್ಟುಕೊಂಡು ರಾಜ್ಯದ ಸೀರೆಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.