ADVERTISEMENT

ಲಾಕ್‌ಡೌನ್‌ ಮುನ್ನ ದಿನ ಹೆಚ್ಚಿನ ಜನಸಂದಣಿ

​ಪ್ರಜಾವಾಣಿ ವಾರ್ತೆ
Published 18 ಮೇ 2021, 14:47 IST
Last Updated 18 ಮೇ 2021, 14:47 IST
ಹೊಸಪೇಟೆಯ ಗಾಂಧಿ ವೃತ್ತದಲ್ಲಿನ ಹೂವಿನ ಮಾರುಕಟ್ಟೆ ಪೊಲೀಸರು ಬಂದ್‌ ಮಾಡಿಸಿದರು, ವ್ಯಾಪಾರಿಗಳು ಹೊರಗೆ ಕುಳಿತುಕೊಂಡು ಮಾರಾಟ ಮಾಡಿದರು
ಹೊಸಪೇಟೆಯ ಗಾಂಧಿ ವೃತ್ತದಲ್ಲಿನ ಹೂವಿನ ಮಾರುಕಟ್ಟೆ ಪೊಲೀಸರು ಬಂದ್‌ ಮಾಡಿಸಿದರು, ವ್ಯಾಪಾರಿಗಳು ಹೊರಗೆ ಕುಳಿತುಕೊಂಡು ಮಾರಾಟ ಮಾಡಿದರು   

ಹೊಸಪೇಟೆ (ವಿಜಯನಗರ): ಬುಧವಾರ (ಮೇ 19) ಬೆಳಿಗ್ಗೆಯಿಂದ ಸಂಪೂರ್ಣ ಲಾಕ್‌ಡೌನ್‌ ಜಾರಿಗೆ ಬರಲಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ಮಂಗಳವಾರ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂತು.

ಬುಧವಾರ ಬೆಳಿಗ್ಗೆ ಹತ್ತು ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಿದ್ದರೂ ಹೆಚ್ಚಿನ ಸಂಖ್ಯೆಯ ಜನ ಮಂಗಳವಾರ ಬೆಳಿಗ್ಗೆ ಖರೀದಿಗೆ ಹೊರ ಬಂದಿದ್ದರು. ರಾಮ ಟಾಕೀಸ್‌, ಟಿ.ಬಿ. ಡ್ಯಾಂ ರಸ್ತೆ, ಮೇನ್‌ ಬಜಾರ್‌, ಗಾಂಧಿ ವೃತ್ತದಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬಂತು.

ಸೋಮವಾರವೇ ಹೂವಿನ ಮಾರುಕಟ್ಟೆ ಸಂಪೂರ್ಣ ಬಂದ್‌ ಮಾಡಲಾಗಿತ್ತು. ಆದರೆ, ಗ್ರಾಹಕರು ಅನೇಕ ದಿನಗಳ ಮೊದಲೇ ಬೇಡಿಕೆ ಸಲ್ಲಿಸಿದ್ದರಿಂದ ಹೂವಿನ ವ್ಯಾಪಾರಿಗಳು ಮಳಿಗೆ ಹೊರಗೆ ಕುಳಿತುಕೊಂಡು, ಹೂ, ಹೂವಿನ ಮಾಲೆ ಮಾರಾಟ ಮಾಡಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಅವರನ್ನು ಅಲ್ಲಿಂದ ಕಳುಹಿಸಿದರು.

ADVERTISEMENT

ಇನ್ನು, ಡಿವೈಎಸ್ಪಿ ವಿ. ರಘುಕುಮಾರ ಅವರು ದುರ್ಗಾ ಪಡೆಯೊಂದಿಗೆ ನಗರದ ಪ್ರಮುಖ ಭಾಗಗಳಲ್ಲಿ ಸಂಚರಿಸಿದರು. ತರಕಾರಿ, ಹಣ್ಣು, ದಿನಸಿ ಖರೀದಿಗೆ ಮುಗಿಬಿದ್ದಿದ್ದ ಜನರಿಗೆ ಎಚ್ಚರಿಕೆ ನೀಡಿ, ಅಲ್ಲಿಂದ ಕಳುಹಿಸಿದರು. ವ್ಯಾಪಾರಿಗಳಿಗೆ ನಿಯಮ ಪಾಲಿಸಿ, ವ್ಯವಹಾರ ನಡೆಸುವಂತೆ ಸೂಚಿಸಿದರು.

ಒಂದೇ ಸ್ಥಳದಲ್ಲಿ ನಿಂತು, ಜನರನ್ನು ಸೇರಿಸಿಕೊಂಡು ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದವರನ್ನು ದುರ್ಗಾ ಪಡೆಯವರು ಕಳುಹಿಸಿದರು. ಅವಧಿ ಮೀರಿದರೂ ಮಳಿಗೆಗಳನ್ನು ತೆರೆದಿದ್ದವರಿಗೆ ಎಚ್ಚರಿಕೆ ನೀಡಿ ಬಂದ್‌ ಮಾಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.