ADVERTISEMENT

ಹೊಸಪೇಟೆ: ವೀರಶೈವ ಲಿಂಗಾಯತ ಜಂಗಮರಿಗೆ ಎಸ್ಸಿ ಪ್ರಮಾಣ ಪತ್ರ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 9:50 IST
Last Updated 25 ಜುಲೈ 2022, 9:50 IST
ವೀರಶೈವ ಲಿಂಗಾಯತ ಜಂಗಮರಿಗೆ ಎಸ್ಸಿ ಪ್ರಮಾಣ ಪತ್ರ ವಿರೋಧಿಸಿ ಪ್ರತಿಭಟನೆ
ವೀರಶೈವ ಲಿಂಗಾಯತ ಜಂಗಮರಿಗೆ ಎಸ್ಸಿ ಪ್ರಮಾಣ ಪತ್ರ ವಿರೋಧಿಸಿ ಪ್ರತಿಭಟನೆ   

ಹೊಸಪೇಟೆ (ವಿಜಯನಗರ): ಪರಿಶಿಷ್ಟರಲ್ಲದ ವೀರಶೈವ ಲಿಂಗಾಯತ ಜಂಗಮರಿಗೆ ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿರುವುದನ್ನು ವಿರೋಧಿಸಿ ಪರಿಶಿಷ್ಟ ಜಾತಿ ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಹಗಲು ವೇಷಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ನಂತರ ಮುಖ್ಯಮಂತ್ರಿಯವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಜಂಗಮ ಹೆಸರಿನ ಬಂಡವಾಳ ಮಾಡಿಕೊಂಡು ವೀರಶೈವ ಲಿಂಗಾಯತ ಜಂಗಮರು ಬೇಡ ಜಂಗಮರ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು, ಬೇಡ–ಬುಡ್ಗ ಜಂಗಮ ಸಮುದಾಯದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮೇಲ್ಜಾತಿಯವರ ಹುನ್ನಾರದಿಂದ ಹಿಂದುಳಿದ ಎಸ್ಸಿ ಸಮುದಾಯದವರಿಗೆ ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಸುಳ್ಳು ಜಾತಿ ಪ್ರಮಾಣ ಪತ್ರದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಎಲ್ಲ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಸರ್ಕಾರದ ಪರ ವಾದಿಸಲು ವಕೀಲರೊಬ್ಬರನ್ನು ನೇಮಿಸಬೇಕು. ವಂಶವೃಕ್ಷ ಪರಿಶೀಲಿಸಿ ಜಾತಿ ಪ್ರಮಾಣ ಪತ್ರ ವಿತರಿಸಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಮಿತಿ ಮುಖಂಡರಾದ ಡಿ. ವೆಂಕಟರಮಣ, ಎಂ.ಸಿ. ವೀರಸ್ವಾಮಿ, ಸಣ್ಣ ಮಾರೆಪ್ಪ, ಸ್ಲಂ ರಾಮಚಂದ್ರ, ಕೆ.ಪಿ. ಉಮಾಪತಿ, ಶೇಕ್ಷಾವಲಿ, ಎ. ಬಸವರಾಜ, ಸೋಮಶೇಖರ್ ಬಣ್ಣದಮನೆ, ರಾಮಜೀ ನಾಯ್ಕ, ಪಿ. ಸಂತೋಷ್‌ ಕೂಡ್ಲಿಗಿ, ಮಲ್ಲಿಕಾರ್ಜುನ ಕೊಟಗಿನಹಾಳು, ಮಲ್ಲೇಶಪ್ಪ, ವೀರೇಶ, ಟಿ. ತಿಪ್ಪೇಸ್ವಾಮಿ, ತೇಜ ನಾಯ್ಕ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.