ಕೊಟ್ಟೂರು: ತಾಲ್ಲೂಕಿನ ಕ್ರೀಡಾಪಟುಗಳಿಗೆ ಮುನ್ಸೂಚನೆ ನೀಡದೇ ಪಟ್ಟಣದ ಗೊರ್ಲಿ ಶರಣಪ್ಪ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಇದ್ದಕ್ಕಿದ್ದಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ದಸರಾ ಕ್ರೀಡಾಕೂಟ ಆಯೋಜಿಸಲು ಮುಂದಾಗಿರುವುದು ಕ್ರೀಡಾ ಪ್ರೇಮಿಗಳ ಅಕ್ರೋಶಕ್ಕೆ ಗುರಿಯಾಗಿದೆ.
‘ಕ್ರೀಡಾಪಟುಗಳಿಗೆ ಮಾಹಿತಿ ನೀಡದಿರುವುದು, ಬ್ಯಾನರ್ ಹಾಗೂ ಪತ್ರಿಕೆಗಳ ಮೂಲಕ ಪ್ರಚಾರಗೊಳಿಸದಿರುವುದು ಹಾಗೂ ಕ್ರೀಡಾಂಗಣ ಸಿದ್ಧಪಡಿಸದೇ ಕಾಟಾಚಾರಕ್ಕೆ ಕ್ರೀಡಾಕೂಟ ಆಯೋಜಿಸಲು ಬಂದಿದ್ದೀರಿ. ನಾವು ಕ್ರೀಡಾಕೂಟದಲ್ಲಿ ಭಾಗವಹಿಸುವುದಿಲ್ಲ’ ಎಂದು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದರು.
ಇಲಾಖೆಯ ಸಂಘಟಕರಾದ ಜಗದೀಶ ಹಾಗೂ ರಾಮಾಂಜನೇಯ ಮಾತನಾಡಿ, ‘ಈ ವರ್ಷ ಜಿಲ್ಲೆಯಾದ್ಯಂತ ದಸರಾ ಕ್ರೀಡಾಕೂಟ ನಡೆಸುವುದನ್ನೇ ಕೈಬಿಡಲು ಚಿಂತಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕ್ರೀಡಾಕೂಟ ನಡೆಸಲು ಅಧಿಕಾರಿಗಳು ಸಮ್ಮತಿಸಿರುವುದರಿಂದ ಅವಸರದಲ್ಲಿ ಆಯೋಜಿಸುವಂತಾಯಿತು. ಉಪನಿರ್ದೇಶಕರ ಅನುಮತಿ ಮೇರೆಗೆ ಮತ್ತೊಮ್ಮೆ ಕ್ರೀಡಾಕೂಟ ಆಯೋಜಿಸಲು ದಿನಾಂಕ ನಿಗದಿಪಡಿಸಲಾಗುವುದು’ ಎಂದರು.
‘ಪತ್ರಿಕೆಗಳಲ್ಲಿ ಮಾಹಿತಿ ನೀಡಿ ಕ್ರೀಡಾಕೂಟ ಆಯೋಜಿಸಿದರೂ ಕೆಲವರು ಇಲ್ಲಸಲ್ಲದ ನೆಪಗಳನ್ನೊಡ್ಡಿ ಕ್ರೀಡಾಕೂಟ ರದ್ದುಪಡಿಸಿದ್ದಾರೆ. ಈವರೆಗೂ ಕ್ರೀಡಾಪಟುಗಳ ಖಾತೆಗೆ ಟಿ.ಎ, ಡಿ.ಎ. ಜಮೆ ಮಾಡಿದ್ದೇವೆ, ಬ್ಯಾಂಕ್ ಖಾತೆ ದಾಖಲೆ ನಿಖರವಾಗಿ ನೀಡದಿರುವವರಿಗೆ ಮಾತ್ರ ಜಮೆ ಆಗಿರುವುದಿಲ್ಲ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ತಿಳಿಸಿದರು.
‘ತಾಲ್ಲೂಕು ಮಟ್ಟದ ದಸರಾ ಕ್ರೀಡೆಗಳು ಕಳೆದ ಅ. 25ರಂದು ಮುಕ್ತಾಯವಾಗಬೇಕು. ಸೆ.1ರಂದು ಜಿಲ್ಲಾಮಟ್ಟದ ಕ್ರೀಡಾಕೂಟ ನಡೆಯಬೇಕಿತ್ತು. ಆದರೆ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳೇ ನಡೆಯದಿರುವುದಕ್ಕೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕ್ರೀಡಾಪಟುಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.