ADVERTISEMENT

ಹಂಪಿಯಲ್ಲಿನ ಅನಧಿಕೃತ ವಾಣಿಜ್ಯ ಸಂಕೀರ್ಣ ತೆರವು: ಜಿಲ್ಲಾಧಿಕಾರಿ ಅನಿರುದ್ಧ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:22 IST
Last Updated 28 ಅಕ್ಟೋಬರ್ 2022, 7:22 IST
ಜಿಲ್ಲಾಧಿಕಾರಿ ಅನಿರುದ್ಧ್
ಜಿಲ್ಲಾಧಿಕಾರಿ ಅನಿರುದ್ಧ್   

ಹೊಸಪೇಟೆ (ವಿಜಯನಗರ):ಹಂಪಿಯ ಎಲ್ಲ ವಾಣಿಜ್ಯ ಸಂಕೀರ್ಣಗಳ ಮಾಹಿತಿ ಪಡೆಯಲಾಗುತ್ತಿದೆ. ಅನಧಿಕೃತ ವಾಣಿಜ್ಯ ಸಂಕೀರ್ಣ ತೆರವುಗೊಳಿಸಲಾಗುವುದು. ಅನುಮತಿ ಪಡೆದವರು ಕಾಲಕಾಲಕ್ಕೆ ನವೀಕರಣ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ತಿಳಿಸಿದರು.

ಹಂಪಿಯಲ್ಲಿ ಶುಕ್ರವಾರ ಕೋಟಿ ಕಂಠ ಗಾಯನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎಎಸ್ ಐ) ಅನುಮತಿ ಇಲ್ಲದೆ ವ್ಯಾಪಾರ ವಹಿವಾಟು ನಡೆಸುವಂತಿಲ್ಲ.
ಹಂಪಿ ರಥಬೀದಿಯಲ್ಲಿ ಜನದಟ್ಟಣೆ ಬಹಳಷ್ಟು ಇರುತ್ತದೆ. ವ್ಯಾಪಾರಕ್ಕಾಗಿ ರಾತ್ರೋರಾತ್ರಿ ಮಳಿಗೆ ತೆರೆಯುತ್ತಾರೆ. ಅನುಮತಿ ಇಲ್ಲದೆ ರೆಸ್ಟೊರೆಂಟ್ ನಡೆಸಲಾಗುತ್ತಿದೆ ಎಂಬ ಮಾಹಿತಿ ಇದೆ. ಅದನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಹಂಪಿಯಲ್ಲಿ ಕುಡಿಯುವ ನೀರು, ಶೌಚಾಲಯದ ಸಮಸ್ಯೆ ಬಹಳ ವರ್ಷಗಳಿಂದ ಇದೆ. ಜಿಲ್ಲಾಡಳಿತವು ಪುರಾತತ್ವ ಇಲಾಖೆಯ ಗಮನಕ್ಕೆ ತಂದಿದೆ. ಹೊಸದಾಗಿ ಕೆಲವೆಡೆ ನಿರ್ಮಿಸಲಾಗುತ್ತಿದೆ. ಹಾಲಿ ಇರುವ ಶೌಚಾಲಯಗಳ ನಿರ್ವಹಣೆ ಸಮಸ್ಯೆ ಇದೆ. ಅವರ ಗಮನಕ್ಕೆ‌ ತಂದು ಸಮಸ್ಯೆ ಬಗೆಹರಿಸಲು ತಿಳಿಸಲಾಗುವುದು. ಬ್ಯಾಟರಿಚಾಲಿತ ವಾಹನಗಳ ಕೊರತೆ ನೀಗಿಸಲಾಗುವುದು ಎಂದರು.

ADVERTISEMENT

₹5 ಕೋಟಿಯಲ್ಲಿ ರಂಗಮಂದಿರ:ಟಿಎಸ್ ಪಿ ಗೆ ಸೇರಿದ ಒಂದೂವರೆ ಎಕರೆ ಜಾಗದಲ್ಲಿ ₹5 ಕೋಟಿಯಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಲಾಗುವುದು. ಅದೇ ರೀತಿ ನಗರಸಭೆ ಆವರಣದಲ್ಲಿನ ರಂಗಮಂದಿರ ಕೂಡ ನವೀಕರಣಗೊಳಿಸಲಾಗುವುದು ಎಂದರು.

ನ. 1ರಂದು ಹಂಪಿ ಬೈ ನೈಟ್ ಚಾಲನೆ:ನವೆಂಬರ್ 1 ರಂದು ಹಂಪಿ ಬೈ ನೈಟ್ ಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ‌ಜೊಲ್ಲೆ ಚಾಲನೆ ನೀಡುವರು. ಮೊದಲ ಹಂತದಲ್ಲಿ ಎರಡು ಪ್ರಯೋಗ‌ ಆರಂಭಿಸಲಾಗುವುದು ಎಂದರು.

ಶೀಘ್ರ ಹಂಪಿ ಉತ್ಸವಕ್ಕೆ ದಿನಾಂಕ ನಿಗದಿ:ಹಂಪಿ ಉತ್ಸವದ ಬಗ್ಗೆ ಶೀಘ್ರದಲ್ಲೇ ದಿನಾಂಕ ನಿಗದಿಗೊಳಿಸಲಾಗುವುದು. ಇಷ್ಟರಲ್ಲೇ ಪೂರ್ವಭಾವಿ ಸಭೆ ನಡೆಸಿ, ಡಿಸೆಂಬರ್ ಅಥವಾ ಜನವರಿಯಲ್ಲಿ ಉತ್ಸವ ಸಂಘಟಿಸುವುದರ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.