ಹೊಸಪೇಟೆ (ವಿಜಯನಗರ): ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುವ ಸ್ಥಳದಲ್ಲಿ 2013ರ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧ ಹಾಗೂ ಪರಿಹಾರ ಕಾಯ್ದೆಯಂತೆ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚನೆ ನೀಡಿದರು.
ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಂತರಿಕ ದೂರು ಸಮಿತಿ ರಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘಟಿತ, ಅಸಂಘಟಿತ, ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ 10 ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಪುರುಷರು ಕೆಲಸ ಮಾಡುತ್ತಿದ್ದರೆ ಅಂತಹ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ ಆಯಾ ಮುಖ್ಯಸ್ಥರು ಆಂತರಿಕ ದೂರು ಸಮಿತಿಯನ್ನು ರಚನೆ ಮಾಡಬೇಕು ಎಂದು ಅವರು ಮಾಹಿತಿ ನೀಡಿದರು.
ಸಮಿತಿಯಲ್ಲಿ ಉದ್ಯೋಗಸ್ಥ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮತ್ತು ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು. ಪ್ರತಿ 3 ವರ್ಷಗಳಿಗೊಮ್ಮೆ ಸಮಿತಿಯನ್ನು ಪುನರ್ ರಚನೆ ಮಾಡಬೇಕು ಎಂದರು.
‘ಉದ್ಯೋಗದಾತರು ಅಥವಾ ಮಾಲೀಕರ ಕರ್ತವ್ಯಗಳು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ನಿಷೇಧಿಸಲಾಗಿದೆ ಎಂಬ ಪ್ರಕಟಣೆ ಅಥವಾ ಸುತ್ತೋಲೆ ಹೊರಡಿಸಬೇಕು. ಆಂತರಿಕ ದೂರು ಸಮಿತಿ ಸದಸ್ಯರ ವಿಳಾಸ, ಸ್ಥಳ ಮತ್ತು ಸಮಯದ ಮಾಹಿತಿ ನೀಡಬೇಕು. ದೂರುದಾರರ ವಿಚಾರಣೆ ಸಂದರ್ಭದಲ್ಲಿ ಅಗತ್ಯ ಕ್ರಮವಹಿಸಬೇಕು. ತಪ್ಪಿದಲ್ಲಿ ₹50 ಸಾವಿರದವರೆಗೆ ದಂಡ ವಿಧಿಸಲಾಗುವುದು ಮತ್ತು ಇಂತಹ ಕಾರ್ಯಗಳು ಪುನಾರವರ್ತನೆ ಆದಲ್ಲಿ ಪ್ರತಿ ಬಾರಿಯ ಕರ್ತವ್ಯ ಉಲ್ಲಂಘನೆಗಾಗಿ ದುಪ್ಪಟ್ಟು ದಂಡ ಕಟ್ಟಬೇಕಾಗುತ್ತದೆ’ ಎಂದು ಡಿ.ಸಿ ಎಚ್ಚರಿಸಿದರು.
ಎಡಿಸಿ ಇ.ಬಾಲಕೃಷ್ಣಪ್ಪ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.