
ಹೊಸಪೇಟೆ (ವಿಜಯನಗರ): ನವದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಕಾರು ಸ್ಫೋಟಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಾದ್ಯಂತ ರಾತ್ರಿಯೇ ಪೊಲೀಸರು ಕಟ್ಟೆಚ್ಚರ ವಹಿಸಿದರು. ಹಲವೆಡೆ ತಪಾಸಣೆ ನಡೆಸಿದರು.
ಲಾಡ್ಜ್‌ಗಳು, ಹೋಂಸ್ಟೇಗಳಲ್ಲಿ ಇತ್ತೀಚೆಗೆ ಬಂದು ತಂಗಿರುವ ವ್ಯಕ್ತಿಗಳ ಮಾಹಿತಿ ಪಡೆದ ಪೊಲೀಸರು, ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಜನರು ಹೆಚ್ಚಾಗಿ ಸಂಚರಿಸುವ ಸ್ಥಳಗಳಲ್ಲಿ ತಪಾಸಣೆ ನಡೆಸಿದರು.
ತುಂಗಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಈಗಾಗಲೇ ಬಿಗಿ ಭದ್ರತೆ ಇದ್ದರೂ, ಪೊಲೀಸರು ಸೋಮವಾರ ರಾತ್ರಿ ಅಲ್ಲಿಗೂ ತೆರಳಿ ಪರಿಶೀಲನೆ ನಡೆಸಿದರು. ಸ್ವತಃ ಎಸ್ಪಿ ಎಸ್.ಜಾಹ್ನವಿ ಅವರೂ ತುಂಗಭದ್ರಾ ಅಣೆಕಟ್ಟೆಗೆ ಶ್ವಾನ ದಳದೊಂದಿಗೆ ತೆರಳಿ ತಪಾಸಣೆ ನಡೆಸಿದರು. ಇತರ ಹಲವೆಡೆಗೆ ತೆರಳಿ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಮಾರ್ಗದರ್ಶನ ನೀಡಿದರು.
‘ಜಿಲ್ಲೆಯಾದ್ಯಂತ, ಅದರಲ್ಲೂ ಮುಖ್ಯವಾಗಿ ಪ್ರಮುಖ ಸ್ಥಳಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ. ಶಂಕಿತ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇರಿಸುವ ಪ್ರಯತ್ನ ನಡೆದಿದೆ’ ಎಂದು ಎಸ್ಪಿ ಜಾಹ್ನವಿ ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಹಂಪಿ ಸುತ್ತಮುತ್ತ ಬಿಗಿಭದ್ರತೆ: ದೇಶ, ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ಹಂಪಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ವಾಹನಗಳ ತಪಾಸಣೆ ಹೆಚ್ಚಿಸಲಾಯಿತು. ಅದಕ್ಕೆ ಮೊದಲಾಗಿ ಅಲ್ಲಿನ ಹಲವು ಹೋಟೆಲ್‌ಗಳು, ಹೋಂ ಸ್ಟೇಗಳಲ್ಲಿ ಸೋಮವಾರ ರಾತ್ರಿಯೇ ತಪಾಸಣೆ ನಡೆಸಲಾಗಿತ್ತು.