ADVERTISEMENT

ವಿಜಯನಗರ: ಬೋಧಕ ಹುದ್ದೆ ನೇಮಕ ಅಧಿಸೂಚನೆ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 17:02 IST
Last Updated 12 ನವೆಂಬರ್ 2021, 17:02 IST
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಮುಖಂಡರು ಶುಕ್ರವಾರ ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಮುಖಂಡರು ಶುಕ್ರವಾರ ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಿಯಮಬಾಹಿರವಾಗಿ ನಡೆಸಲಾಗುತ್ತಿದೆ ಎನ್ನಲಾದ ಬೋಧಕ ಹುದ್ದೆಗಳ ನೇಮಕಾತಿ ಅಧಿಸೂಚನೆ ರದ್ದುಪಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ಶುಕ್ರವಾರ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಅವರಿಗೆ ಮನವಿ ಸಲ್ಲಿಸಿ ಹಕ್ಕೊತ್ತಾಯ ಮಾಡಿದರು.

ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಸರ್ಕಾರದ ನಿಯಮಾನುಸಾರ ಮೀಸಲಾತಿ ಅಡಿ ನೇಮಕಾತಿ ನಡೆಯಬೇಕು. ಆದರೆ, ಅದನ್ನು ಮಾಡಿಲ್ಲ. ಹುದ್ದೆಗಳ ವರ್ಗೀಕರಣವೂ ಸರಿಯಾಗಿ ಮಾಡಿಲ್ಲ. ಆಯಾ ಪ್ರವರ್ಗವಾರು ಮೀಸಲಾತಿ ನಿಗದಿಪಡಿಸಿಲ್ಲ. ಕುಲಪತಿ ಅವಧಿ ಕೊನೆಗೊಳ್ಳುವ ಆರು ತಿಂಗಳ ಒಳಗೆ ಯಾವುದೇ ರೀತಿಯ ನೇಮಕಾತಿ ಮಾಡುವಂತಿಲ್ಲ. ಹಾಲಿ ಕುಲಪತಿ ಅವಧಿ ಐದು ತಿಂಗಳಷ್ಟೇ ಇದೆ. ಹೀಗಿದ್ದರೂ ನಿಯಮ ಮೀರಿ ನೇಮಕಾತಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ನೇಮಕಾತಿಯಲ್ಲಿನ ಲೋಪವನ್ನು ಪ್ರಶ್ನಿಸಿದ್ದಕ್ಕೆ ಸಹ ಪ್ರಾಧ್ಯಾಪಕ ಎಂ.ಮಲ್ಲಿಕಾರ್ಜುನ ಗೌಡ ಅವರನ್ನು ಬೇರೆಡೆ ವರ್ಗಾಯಿಸಲಾಗಿದೆ. ಹೀಗೆ ನಿಯಮದ ವಿರುದ್ಧ ನಡೆದುಕೊಳ್ಳಲಾಗುತ್ತಿದೆ. ಕೂಡಲೇ ಅವರ ವರ್ಗಾವಣೆ ಆದೇಶ ರದ್ದುಪಡಿಸಬೇಕು. ಹಾಲಿ ನೌಕರರಿಗೆ ಕೆಲಸದ ಭದ್ರತೆ ನೀಡಬೇಕು. ನಿವೃತ್ತ ನೌಕರರಿಗೆ ಪಿಂಚಣಿ ಸೌಕರ್ಯ ಕಲ್ಪಿಸಬೇಕು. ಎಲ್ಲ ಅಕ್ರಮಗಳ ಕೇಂದ್ರವಾಗಿರುವ ಕಾನೂನು ಘಟಕ ತಕ್ಷಣವೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಮನ್ವಯ ಸಮಿತಿಯ ವಿಜಯನಗರ ಜಿಲ್ಲಾ ಅಧ್ಯಕ್ಷ ಜಿ.ಶಿವಕುಮಾರ್, ಹಿರಿಯ ಮುಖಂಡರಾದ ಸಣ್ಣ ಈರಪ್ಪ, ಅಂಬಣ್ಣ ಕೆಂಗೇರಿ, ಸಿ.ಅರುಣಕುಮಾರ್, ಎಚ್‌. ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.