ADVERTISEMENT

ರೈಲ್ವೆ ಮೇಲ್ಸೇತುವೆ ಯಾವಾಗ ಪೂರ್ಣ?

ಸಂಸದರಿಗೆ ಪ್ರಶ್ನೆ, ಹಲವು ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:15 IST
Last Updated 26 ಅಕ್ಟೋಬರ್ 2025, 7:15 IST
ಹೊಸಪೇಟೆಯಲ್ಲಿ ಶನಿವಾರ ಸಂಸದ ಇ.ತುಕಾರಾಂ ಅವರಿಗೆ ರೈಲ್ವೆ ಸೇವೆ, ಸೌಲಭ್ಯ, ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಶನಿವಾರ ಸಂಸದ ಇ.ತುಕಾರಾಂ ಅವರಿಗೆ ರೈಲ್ವೆ ಸೇವೆ, ಸೌಲಭ್ಯ, ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿ ಹಾಗೂ ಇತರ ಹಲವಾರು ಊರುಗಳಿಗೆ, ಗಂಗಾವತಿ, ಕಂಪ್ಲಿ ಮತ್ತಿತರ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೊನೆಗೊಳ್ಳುವುದು ಯಾವಾಗ ಎಂಬ ಪ್ರಶ್ನೆಯನ್ನು ರೈಲ್ವೆ ಬಳಕೆದಾರರು ಶನಿವಾರ ಸಂಸದ ಇ.ತುಕಾರಾಂ ಅವರಲ್ಲಿ ಕೇಳಿದರು.

ಕಳೆದ 6 ತಿಂಗಳಿಂದ ಮಂದಗತಿಯಲ್ಲಿ ಸಾಗುತ್ತಿರುವ ಎಲ್‌ಸಿ ಗೇಟ್ ಸಂಖ್ಯೆ85, ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದ ಬಹಳಷ್ಟು ಸಮಸ್ಯೆ ಎದುರಾಗಿದೆ. ಪ್ರವಾಸಿಗರು, ಸಾರ್ವಜನಿಕರು ದಿನನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಮೇಲ್ಸೇತುವೆ,  ರಸ್ತೆ ಅಗಲಗೊಳಿಸುವುದಕ್ಕೆ ತಮ್ಮ ಮನೆ ಕಳೆದುಕೊಳ್ಳುತ್ತಿರುವ ನಿವಾಸಿಗಳಿಗೆ ರೈಲ್ವೆ ಇಲಾಖೆಯಿಂದ ಮಂಜೂರು ಆಗಿರುವ ಪರಿಹಾರ ಮೊತ್ತವನ್ನು ಬೇಗನೆ ವಿತರಣೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಂಸದರಲ್ಲಿ ಒತ್ತಾಯಿಸಲಾಯಿತು.

ತುಕರಾಂ ಅವರು ಪತ್ನಿ, ಸಂಡೂರು ಶಾಸಕಿ ಅನ್ನಪೂರ್ಣಾ ಅವರ ಜತೆಗೆ ಶನಿವಾರ ನಗರದ ನೈರುತ್ಯ ರೈಲ್ವೆ ವಲಯ ಸಲಹಾ ಸಮಿತಿಯ ಹಿರಿಯ ಸದಸ್ಯ ಬಾಬುಲಾಲ್ ಜೈನ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ವತಿಯಿಂದ ಈ ಮನವಿ ಸಲ್ಲಿಸಲಾಯಿತು.

ADVERTISEMENT

ಮೇಲ್ದರ್ಜೆಗೆ ಏರಿಸಿ: ಹೊಸಪೇಟೆ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿದ್ದು, ದೇಶ ವಿದೇಶದಿಂದ ಅಸಂಖ್ಯಾತ ಪ್ರವಾಸಿಗರು ರೈಲ್ವೆ ಮೂಲಕ ಆಗಮಿಸುತ್ತಿದ್ದಾರೆ. ಹೀಗಾಗಿ ಹೊಸಪೇಟೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಹೆಚ್ಚುವರಿಯಾಗಿ ನೂತನ ಪ್ಲಾಟ್ ಫಾರಂಗಳನ್ನು ನಿರ್ಮಿಸಿ ರೈಲ್ವೆ ಟರ್ಮಿನಲ್ ಸೌಲಭ್ಯ ಒದಗಿಸಬೇಕು ಎಂದು ಸಂಸದರಿಗೆ ಮನವಿ ಸಲ್ಲಿಸಲಾಯಿತು.

ಹೊಸಪೇಟೆ ಮಾರ್ಗವಾಗಿ ವಾರದಲ್ಲಿ ಎರಡು ದಿನ ಸಂಚರಿಸುತ್ತಿರುವ ಹುಬ್ಬಳ್ಳಿ-ಹೊಸಪೇಟೆ-ಚೆನ್ನೈ (17313/17314) ರೈಲನ್ನು ಪ್ರತಿನಿತ್ಯ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಉತ್ತರ ಕರ್ನಾಟಕದಿಂದ ಮಂತ್ರಾಲಯ, ರಾಯಚೂರು ಕಡೆಗೆ ತೆರಳುವ ಭಕ್ತಾದಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ರದ್ದುಪಡಿಸಿರುವ ಬೆಳಗಾಂ-ಹೈದರಾಬಾದ್‌-ಮಣಗೂರು ರೈಲನ್ನು (07335/07336) ಪುನರಾರಂಭಿಸಬೇಕು. ಹೊಸಪೇಟೆ-ಮುಂಬೈ (ಸಿಎಸ್‍ಟಿಎಂ) ರೈಲಿನ (11139/11140) ಹಳೇ ಕೋಚ್‍ಗಳನ್ನು ಬದಲಾಯಿಸಿ, ಪೂರ್ಣ ಪ್ರಮಾಣದ ಎಲ್.ಎಚ್.ಬಿ.ಕೋಚ್‍ಗಳಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಲಾಯಿತು.

ಸಂಘದ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್‍ ಕುಡುತಿನಿ, ನಗರಸಭೆ ಸದಸ್ಯ ಮಂಜುನಾಥ, ಬ್ರಾಹ್ಮಣ ಸಮಾಜದ ದಿವಾಕರ್, ಮುಖಂಡರಾದ ಆಶಲತಾ ಸೋಮಪ್ಪ, ಮಗನ್‍ಲಾಲ್‍ಜೀ, ಕೇಸರಿಲಾಲ್‍ಜೀ, ಮಹೇಂದ್ರಕುಮಾರ್  ಇತರರು ಇದ್ದರು.

ಕರಾವಳಿಗೆ ಸಂಪರ್ಕ ಅಗತ್ಯ

ಕರಾವಳಿ ಹಾಗೂ ಕಲ್ಯಾಣ ಕರ್ನಾಟಕದ ನಡುವೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೊಟ್ಟೂರು-ದಾವಣಗೆರೆ ಮಾರ್ಗವಾಗಿ ಹೊಸಪೇಟೆಯಿಂದ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸುವ ಅಗತ್ಯವಿದೆ. ಇದರಿಂದ ವಿಶ್ವ ಪಾರಂಪರಿಕ ತಾಣವಾದ ಹಂಪಿ-ಬೇಲೂರು ಹಳೆಬೀಡು-ಶ್ರವಣ ಬೆಳಗೊಳ-ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯ ನಡುವೆ ಸಂಪರ್ಕ ಉಂಟಾಗಿ ಪ್ರವಾಸೋಧ್ಯಮದ ಬೆಳವಣಿಗೆ ಆಗುತ್ತದೆ. ಶೈಕ್ಷಣಿಕ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಉನ್ನತ ವ್ಯಾಸಂಗಕ್ಕೆ ತೆರಳುವ ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಈ ನಿಟ್ಟಿನಲ್ಲಿ ಕೇಂದ್ರದ ಗಮನಕ್ಕೆ ತಂದು ಕರಾವಳಿಗೆ ನೇರ ರೈಲು ಸಂಪರ್ಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಂಸದರನ್ನು ಒತ್ತಾಯಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.