ADVERTISEMENT

ವಿಜಯನಗರ: ವಯಸ್ಸಿನ ಮಿತಿ ಇಲ್ಲದೆ ಸಮೀಕ್ಷೆ ನಡೆಯಲಿ

ಮಾಜಿ ದೇವದಾಸಿಯರ ಮರುಸಮೀಕ್ಷೆ–ಸಮಾಲೋಚನಾ ಸಭೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 4:48 IST
Last Updated 13 ಅಕ್ಟೋಬರ್ 2025, 4:48 IST
ಹೊಸಪೇಟೆಯಲ್ಲಿ ಭಾನುವಾರ ಮಾಜಿ ದೇವದಾಸಿಯರ ಮರುಸಮೀಕ್ಷೆ ಕುರಿತಂತೆ ಸಮಾಲೋಚನಾ ಸಭೆ ನಡೆಯಿತು –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಭಾನುವಾರ ಮಾಜಿ ದೇವದಾಸಿಯರ ಮರುಸಮೀಕ್ಷೆ ಕುರಿತಂತೆ ಸಮಾಲೋಚನಾ ಸಭೆ ನಡೆಯಿತು –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಮಾಜಿ ದೇವದಾಸಿಯರ ಮರುಸಮೀಕ್ಷೆ ವಿಚಾರದಲ್ಲಿ ಸರ್ಕಾರ ಗೊಂದಲಕ್ಕೆ ಅವಕಾಶ ನೀಡಬಾರದು, 45 ವರ್ಷ ಮೇಲ್ಪಟ್ಟವರನ್ನು ಮಾತ್ರ ಸಮೀಕ್ಷೆಗೆ ಗುರಿಪಡಿಸಬೇಕೆಂದು ಎಲ್ಲೂ ಹೇಳಿಲ್ಲ, ಹೀಗಾಗಿ ವಯಸ್ಸಿನ ಮಿತಿಯನ್ನು ತೆಗೆದುಹಾಕಿ ಎಲ್ಲರ ಸಮೀಕ್ಷೆಯನ್ನೂ ಸಮಗ್ರವಾಗಿ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ- ಕರ್ನಾಟಕ, ಸಖಿ ಸಂಸ್ಥೆ ಹೊಸಪೇಟೆ ಇವರ ಸಹಯೋಗದಲ್ಲಿ ಭಾನುವಾರ ಇಲ್ಲಿನ ಭಾವೈಕ್ಯತಾ ವೇದಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 15 ಜಿಲ್ಲೆಗಳ ದೇವದಾಸಿ ತಾಯಂದಿರು, ಅವರ ಮಕ್ಕಳು ಹಾಗೂ ಸಮುದಾಯದೊಂದಿಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ತಮ್ಮ ಜಿಲ್ಲೆಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು ವಿವರಿಸಿದ ಪ್ರತಿನಿಧಿಗಳು ಕೊನೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡರು.

ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪ್ರೊಫೆಸರ್ ಆರ್‌.ವಿ.ಚಂದ್ರಶೇಖರ್, ಸಖಿ ಟ್ರಸ್ಟ್‌ನ ಸಂಸ್ಥಾಪಕಿ ಭಾಗ್ಯಲಕ್ಷ್ಮಿ, ಕೊಪ್ಪಳದ ರಾಜ್ಯ ಸಂಚಾಲಕ ಯಮನೂರಪ್ಪ, ವಿಮುಕ್ತ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ವೇದಿಕೆ ಕರ್ನಾಟಕದ ಸಂಚಾಲಕರಾದ ಶರೀಫ ಬಿಳೆಯಲಿ, ಮಂಜುಳಾ ಮಾಳ್ಗಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

ADVERTISEMENT

‘ಸಮೀಕ್ಷೆ ಕುರಿತು ವ್ಯಾಪಕವಾದ ಪ್ರಚಾರ ಮಾಡಿ ಮಾಹಿತಿ ತಲುಪಿಸಿ ಸಮೀಕ್ಷೆಯಲ್ಲಿ ಒಳಗೊಳ್ಳಬೇಕು. ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ಸಮಿತಿಗೆ ಈ ಸಮೀಕ್ಷೆಯ ಬಗ್ಗೆ ಯಾವುದೇ ಮಾಹಿತಿ ತಲುಪಿಲ್ಲ ಮತ್ತು ಸಮೀಕ್ಷೆಯ ಬಗ್ಗೆ ಸಭೆಯನ್ನು ಮಾಡದೇ ಸಮೀಕ್ಷೆ ಪ್ರಾರಂಭಿಸಿದ್ದಾರೆ. ಅವರಿಗೆಲ್ಲ ಸಮಗ್ರವಾದ ತರಬೇತಿಯನ್ನು ನೀಡಿ ಸಮೀಕ್ಷೆಯನ್ನು ಮುರಿದುವರೆಸಬೇಕು’ ಎಂದು ಸಭೆಯಲ್ಲಿ ಹಲವರು ಮಾಹಿತಿ ನೀಡಿದರು.

‘ಸಮೀಕ್ಷೆಯಲ್ಲಿ ಕೇಳುತ್ತಿರುವ ದಾಖಲೆಗಳನ್ನು ವಿವಿಧ ಇಲಾಖೆಗಳಿಂದ ಪಡೆಯಬೇಕಾಗಿದೆ, ಅದಕ್ಕಾಗಿ ತುಂಬಾ ಸಮಯ ಬೇಕಾಗುತ್ತದೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕಾಲಮಿತಿಯಲ್ಲಿ ದಾಖಲೆಗಳನ್ನು ನೀಡಿ ಸಮೀಕ್ಷೆ ಕಾರ್ಯ ಕೈಗೊಳ್ಳಲು ಸಹಕರಿಸಬೇಕು. ಕೆಲವು ಜಿಲ್ಲೆಯಲ್ಲಿ ದೇವದಾಸಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ತಾಲ್ಲೂಕಿಗೆ ಒಬ್ಬರಿಗಿಂತ ಹೆಚ್ಚು ಸಮೀಕ್ಷೆದಾರರನ್ನು ನೇಮಕ ಮಾಡಬೇಕು’ ಎಂದು ಸಹ ಸಭೆಯಲ್ಲಿ ಒತ್ತಾಯಿಸಲಾಯಿತು.

ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ರೇಣುಕಾ ಕೊಟ್ಟೂರು, ಸ್ನೇಹ ಸಂಸ್ಥೆಯ ಚಿನ್ನಪುರದಮ್ಮ, ಬಾಗಲಕೋಟೆಯ ಪ್ರಕಾಶ, ಹಾವೇರಿಯ ನಾಗರಾಜ, ವಿಜಯಪುರದ ಸಿದ್ದು, ಕಲಬುರ್ಗಿಯರ ಪರಶುರಾಮ, ಕೊಪ್ಪಳದ ರೇಣುಕಾ, ರಾಯಚೂರಿನ ಬಸವರಾಜ ರಾಯಚೂರು ಇತರರು ಪಾಲ್ಗೊಂಡಿದ್ದರು.

ದಾಖಲಾತಿಗಳ ವಿಳಂಬದ ಕಾರಣದಿಂದ ಅನೇಕ ದೇವದಾಸಿ ಮಹಿಳೆಯರಿಗೆ ಬಹಳ ತೊಂದರೆ ಆಗಿದೆ ಸಮೀಕ್ಷೆಯ ಅವಧಿಯನ್ನು ಡಿಸೆಂಬರ್‌ವರೆಗೆ ವಿಸ್ತರಿಸಬೇಕು
ಭಾಗ್ಯಲಕ್ಷ್ಮಿ ಸಖಿ ಟ್ರಸ್ಟ್‌ ಸಂಸ್ಥಾಪಕರು
ಸಮೀಕ್ಷೆ ಕುರಿತು ದೇವದಾಸಿ ಮಹಿಳೆಯರಿಗೆ ಮತ್ತು ಅವರ ಕುಟುಂಬಕ್ಕೆ ಸರಿಯಾದ ಮಾಹಿತಿಯೇ ಇಲ್ಲ ಎಂಬುದು ಇಂದಿನ ಸಭೆಯ ಬಳಿಕ ಗೊತ್ತಾಗಿದೆ
ಪ್ರೊ.ಆರ್‌.ವಿ.ಚಂದ್ರಶೇಖರ್‌ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿವಿ ಪ್ರಾಧ್ಯಾಪಕ

ಮರುಸಮೀಕ್ಷೆ–ಹಕ್ಕೊತ್ತಾಯಗಳು

*ಎಲ್ಲಾ ಜಿಲ್ಲೆಗಳಿಗೆ ಮರು ಸಮೀಕ್ಷೆಯ ಕುರಿತು ಒಂದೇ ರೀತಿಯ ನಿಯಮಾವಳಿ ಅಗತ್ಯ

* ಮರುಸಮೀಕ್ಷೆಯ ಬಗ್ಗೆ ಪ್ರತಿಯೊಂದು ಗ್ರಾಮಗಳಲ್ಲಿ ಪ್ರಚಾರ ಮಾಡುವುದು ಮತ್ತು ಸೂಕ್ತ ದಾಖಲಾತಿಗಳ ಬಗ್ಗೆ ಮಾಹಿತಿ ನೀಡುವುದು

* ಜಿಲ್ಲಾಮಟ್ಟದ ಮತ್ತು ತಾಲ್ಲೂಕುಮಟ್ಟದ ಮರುಸಮೀಕ್ಷೆಯ ಮೌಲ್ಯಮಾಪನ ಸಮಿತಿ ರಚಿಸಬೇಕು

* ಸಮೀಕ್ಷೆಯ ಕುರಿತು ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು

* ತೀರಾ ಅನಾರೋಗ್ಯ ದಿಂದ ಬಳಲುತ್ತಿರುವ ದೇವದಾಸಿ ಮಹಿಳೆಯರ ಸಮೀಕ್ಷೆಯನ್ನು ಅವರು ವಾಸಿಸುವ ಗ್ರಾಮಕ್ಕೆ ತೆರಳಿ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.