ADVERTISEMENT

Devadasi Survey | ಸಮೀಕ್ಷೆಯ ಬಳಿಕ ಸೌಲಭ್ಯ ನಿಶ್ಚಿತ: ಜಿ.ಪದ್ಮಾವತಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:58 IST
Last Updated 18 ಸೆಪ್ಟೆಂಬರ್ 2025, 4:58 IST
ಹೊಸಪೇಟೆಯಲ್ಲಿ ಬುಧವಾರ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು  –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಬುಧವಾರ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಮಾಜಿ ದೇವದಾಸಿಯರ ಪುನರ್ ಸಮೀಕ್ಷೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಆರಂಭವಾಗಿರುವುದು ಅವರ ನಿಜವಾದ ಸಂಖ್ಯೆ ಮತ್ತು ಸ್ಥಿತಿಗತಿ ತಿಳಿದುಕೊಳ್ಳುವುದಕ್ಕೆ. ಇದರಲ್ಲಿ ತಪ್ಪದೆ ಪಾಲ್ಗೊಂಡರೆ ಸರ್ಕಾರಿ ಸೌಲಭ್ಯ ಸಿಗುವಂತೆ ಮಾಡುವುದು ಸುಲಭ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಹೇಳಿದರು.

ಇಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಈ ಎರಡೂ ವರ್ಗಗಳ ಕುಟುಂಬಗಳಿಗೆ ಸಮರ್ಪಕವಾಗಿ ಸೌಲಭ್ಯ ದೊರೆತಿಲ್ಲದಿರುವುದು ಕಾಣಿಸುತ್ತಿದೆ, ಅಧಿಕಾರಿಗಳು, ಸಿಡಿಪಿಒಗಳು ಇನ್ನಷ್ಟು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದರು.

ಮಾಜಿ ದೇವದಾಸಿಯರ ಮಕ್ಕಳ ಶಿಕ್ಷಣಕ್ಕೆ ಜಿಲ್ಲೆಗೆ ₹70 ಲಕ್ಷ ಅನುದಾನ ಮೀಸಲಿಡಲಾಗಿದೆ, ಅದನ್ನು ಬಳಕೆ ಆಗಿಲ್ಲ. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಅನೇಕ ಲಿಂಗತ್ವ ಅಲ್ಪಸಂಖ್ಯಾತರು ಅಲೆದಾಡುತ್ತಿದ್ದರೂ ಸಿಬ್ಬಂದಿ ಕೊರತೆ ನೆಪ ಹೇಳಿ ಅವರಿಗೆ ಸೌಲಭ್ಯ ಸಿಗದಂತೆ ಮಾಡಲಾಗುತ್ತಿದೆ. ಇದು ಸಲ್ಲದು. ತಕ್ಷಣ ಸೂಕ್ತ ದಾಖಲೆ ಸಲ್ಲಿಸುವ ಎಲ್ಲರಿಗೂ ಟಿ.ಜಿ ಕಾರ್ಡ್‌, ಆ ಮೂಲಕ ರೇಷನ್ ಕಾರ್ಡ್‌ ದೊರಕಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರು ತಾಕೀತು ಮಾಡಿದರು.

ADVERTISEMENT

ಕೇವಲ 23 ಮಂದಿಗೆ ನಿವೇಶನ: ಜಿಲ್ಲೆಯಲ್ಲಿ 704 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ ಎಂದು ಎನ್‌ಜಿಒಗಳು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ, ಇದುವರೆಗೆ 105 ಮಂದಿ ಮಾತ್ರ ನಿವೇಶನ, ವಸತಿಗಾಗಿ ಅರ್ಜಿ ಸಲ್ಲಿಸಿದ್ದಾರೆ, ಈ ಪೈಕಿ 23 ಮಂದಿಗೆ ನಿವೇಶನ ಮಂಜೂರಾಗಿದೆ. ದಾಖಲೆಪತ್ರಗಳನ್ನು ಸಮರ್ಪಕವಾಗಿ ಸಲ್ಲಿಸುವ ನಿಟ್ಟಿನಲ್ಲಿ ಈ ಸಮುದಾಯದವರು ಎನ್‌ಜಿಒ ಜತೆಗೆ ಸಹಕರಿಸಬೇಕು, ಆಗ ಸುಲಭವಾಗಿ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತವೆ ಎಂದು ಪದ್ಮಾವತಿ ಹೇಳಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ವೀರೇಂದ್ರ ಕುಮಾರ್ ಮಾತನಾಡಿ, ಸಿಬಿಲ್ ಸ್ಕೋರ್ ಸರಿಯಾಗಿದ್ದರೆ ಖಂಡಿತ ಸಾಲ ಸೌಲಭ್ಯಕ್ಕೆ ಅಡಚಣೆ ಆಗುವುದಿಲ್ಲ, ಯಾವುದೇ ಸಾಲ ಅರ್ಜಿಯನ್ನು ಒಂದು ತಿಂಗಳೊಳಗೆ ವಿಲೇ ಮಾಡಲು ಬ್ಯಾಂಕ್‌ಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ, ಮರಣ ಹೊಂದಿದ ಮಾಜಿ ದೇವದಾಸಿಯರ ಪಿಂಚಣಿ ಹಣವನ್ನು ಬ್ಯಾಂಕ್‌ ಮತ್ತೆ ಸರ್ಕಾರಕ್ಕೆ ಹಿಂದಿರುಗಿಸುವುದಿಲ್ಲ ಎಂದರು.

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ನಾಯಕಿ ಮಂಜಮ್ಮ, ಮಾಜಿ ದೇವದಾಸಿಯರ ಪರ ಹೋರಾಟಗಾರ್ತಿ ನಾಗರತ್ನಮ್ಮ, ಸ್ನೇಹಾ ಸಂಸ್ಥೆ, ಚಿಗುರು ಸೇವಾ ಸಂಸ್ಥೆಯ ಪ್ರತಿನಿಧಿಗಳು ತಮ್ಮ ಅಹವಾಲು ಹೇಳಿಕೊಂಡರು.

ನಿಗಮದ ಪ್ರಧಾನ ವ್ಯವಸ್ಥಾಪಕಿ ಅಕ್ಕಮಹಾದೇವಿ, ಜಿಲ್ಲಾ ನಿರೂಪಣಾ ಅಧಿಕಾರಿ ಎಚ್.ಮುದುಗಪ್ಪ, ನಿಗಮದ ಅಭಿವೃದ್ಧಿ ನಿರೀಕ್ಷಕರಾದ ಸುಧಾ ಚಿದ್ರಿ, ಸಿಡಿಪಿಒಗಳು ಇದ್ದರು.

ಮಾಹಿತಿ ಕೊಟ್ಟು ಸಹಕರಿಸಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎಸ್.ಶ್ವೇತಾ ಮಾತನಾಡಿ ‘ಮಗು ಅತ್ತರೆ ಮಾತ್ರ ಅಮ್ಮ ಹಾಲು ಕೊಡುತ್ತಾಳೆ ಅದೇ ರೀತಿ ಸೂಕ್ತ ಸೌಲಭ್ಯ ಪಡೆಯಲು ಫಲಾನುಭವಿಗಳು ಒಂದಿಷ್ಟು ಪ್ರಯತ್ನ ಮಾಡಬೇಕಾಗುತ್ತದೆ ದಾಖಲೆಗಳು ಸಮರ್ಪಕವಾಗಿದ್ದರೆ ಖಂಡಿತ ವಿಳಂಬ ಇಲ್ಲದೆ ಸೌಲಭ್ಯ ದೊರಕಿಸಲಾಗುವುದು ಸಮರ್ಪಕ ಮಾಹಿತಿ ಕೊಡುವಲ್ಲಿ ವಿಳಂಬ ಮಾಡಬಾರದು’ ಎಂದು ಕೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.